ಪಾವಂಜೆ, ಜೂನ್ 23: ಡಿಸೆಂಬರ್ 20, 2026ರಂದು ಉಡುಪಿಯಲ್ಲಿ ನಡೆಯಲಿರುವ ದೇವಾಡಿಗ ಸಮಾಜದ ಮಹಾ ಅಧಿವೇಶನ-2026ರ ಪೂರ್ವಭಾವಿ ಸಭೆಯು ದೇವಾಡಿಗ ಸಮಾಜ ಸೇವಾ ಸಂಘ (ರಿ.) ಪಾವಂಜೆಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಿಶ್ವ ದೇವಾಡಿಗ ಮಹಾಮಂಡಳದ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ವಹಿಸಿದ್ದರು. ಅವರು ಮಹಾಧಿವೇಶನದ ಅಗತ್ಯತೆ ಹಾಗೂ ಅದರ ಮಹತ್ವವನ್ನು ವಿವರಿಸಿ, ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಕೋರಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮುಂಬೈ ದೇವಾಡಿಗ ಸಂಘದ ಅಧ್ಯಕ್ಷ ರವಿ ಎಸ್. ದೇವಾಡಿಗ ಮಾತನಾಡಿ, “ಹಣಬಲ ಮಾತ್ರ ಸಾಕಾಗುವುದಿಲ್ಲ, ಜನಬಲವೂ ಅಷ್ಟೇ ಮುಖ್ಯ. ಈ ಮಹಾಧಿವೇಶನದ ಯಶಸ್ಸಿಗೆ ಎಲ್ಲರ ಸಕ್ರಿಯ ಸಹಕಾರ ಅಗತ್ಯವಾಗಿದೆ” ಎಂದು ಹೇಳಿದರು.
ಸಂಘಟನಾ ಕಾರ್ಯದರ್ಶಿ ಜನಾರ್ದನ ಪಡುಪಣಂಬೂರು ಮಾತನಾಡಿ, ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ವಿವಿಧ ಉಪಸಮಿತಿಗಳನ್ನು ರಚಿಸುವ ಅಗತ್ಯವಿದೆ ಎಂದು ತಿಳಿಸಿದರು. ಉಡುಪಿ ನಗರಸಭೆಯ ಮಾಜಿ ಸದಸ್ಯ ವಿಜಯ ಕೊಡವೂರು ಗ್ರಾಮ ಮಟ್ಟದಲ್ಲಿ ಸಭೆಗಳನ್ನು ರಚಿಸಿ ಸಂಘಟನೆಯನ್ನು ತಳಮಟ್ಟದಿಂದಲೇ ಬಲಿಷ್ಠಗೊಳಿಸುವ ಕುರಿತು ವಿವರಿಸಿದರು.
ಪಾವಂಜೆ ಸಂಘದ ಮಹಿಳಾ ವೇದಿಕೆ ಅಧ್ಯಕ್ಷೆ ವಿಜಯಲಕ್ಷ್ಮಿ ಜನಾರ್ದನ್ ಹಾಗೂ ಯುವ ವೇದಿಕೆ ಅಧ್ಯಕ್ಷ ಗಣೇಶ್ ದೇವಾಡಿಗ ಉಪಸ್ಥಿತರಿದ್ದರು.
ಸಭೆಯಲ್ಲಿ ಉಡುಪಿ, ಉದ್ಯಾವರ, ಕಟಪಾಡಿ, ಕಾಪು, ಉಚ್ಚಿಲ, ಪಡುಬಿದ್ರೆ, ಎರ್ಮಾಳು, ಎಲ್ಲೂರು, ಬಂಟಕಲ್ಲು, ಪಲಿಮಾರು, ಬೆಳ್ಮಣ್, ಹೆಜಮಾಡಿ, ಮೂಲ್ಕಿ ಹಾಗೂ ಪಾವಂಜೆ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು. ಪಾವಂಜೆ ಸಂಘದ ಅಧ್ಯಕ್ಷ ಅಣ್ಣಪ್ಪ ದೇವಾಡಿಗ ಪಕ್ಷಿಕೆರೆ, ಉಡುಪಿ ಸಂಘದ ಅಧ್ಯಕ್ಷ ರತ್ನಾಕರ್ ಜಿ.ಎಸ್., ಮಂಗಳೂರು ಸಂಘದ ಅಧ್ಯಕ್ಷ ಅಶೋಕ್ ಮೊಯಿಲಿ ಸೇರಿದಂತೆ ವಿವಿಧ ಸಂಘಗಳ ಅಧ್ಯಕ್ಷರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮವು ಮಹಿಳಾ ವೇದಿಕೆ ಉಪಾಧ್ಯಕ್ಷೆ ಜಯಶ್ರೀ ಯಾದವ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಏಕನಾಥೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಉಪಾಧ್ಯಕ್ಷ ಯಾದವ ದೇವಾಡಿಗ ಸ್ವಾಗತಿಸಿದರು. ವಿಶ್ವ ದೇವಾಡಿಗ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಗಣೇಶ್ ದೇವಾಡಿಗ ಅಂಬಲಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾವಂಜೆ ಸಂಘದ ಉಪಾಧ್ಯಕ್ಷ ಸತೀಶ್ ಇಂದಿರಾನಗರ ವಂದಿಸಿದರು. ಸಂಘದ ನಿಕಟಪೂರ್ವ ಅಧ್ಯಕ್ಷ ರಾಮದಾಸ್ ಪಾವಂಜೆ ಕಾರ್ಯಕ್ರಮ ನಿರೂಪಿಸಿದರು.