ಮಂಗಳೂರು, ಜೂ. 18 : ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ವತಿಯಿಂದ ಆಯೋಜಿಸಲಾಗಿರುವ ‘ಭ್ರಾಮರೀ ಯಕ್ಷವೈಭವ–2026’ ಕಾರ್ಯಕ್ರಮವು ಆಗಸ್ಟ್ 1ರಂದು ಶನಿವಾರ ಸಂಜೆ 7 ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಆರು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದ ಕೆ.ಎಚ್. ದಾಸಪ್ಪ ರೈ ಅವರಿಗೆ ಪ್ರತಿಷ್ಠಿತ ‘ಭ್ರಾಮರೀ ಯಕ್ಷಮಣಿ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಪ್ರಶಸ್ತಿಯು ರೂ.15 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಬೆಳ್ಳಿಯ ಪದಕವನ್ನು ಒಳಗೊಂಡಿದೆ.
ತಮ್ಮ 15ನೇ ವಯಸ್ಸಿನಲ್ಲೇ ಯಕ್ಷಗಾನ ರಂಗ ಪ್ರವೇಶಿಸಿದ ಕೆ.ಎಚ್. ದಾಸಪ್ಪ ರೈ ಅವರು ಕಳೆದ ಆರು ದಶಕಗಳಿಗೂ ಹೆಚ್ಚು ಕಾಲ ಯಕ್ಷಗಾನ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಕರ್ನಾಟಕ ಮೇಳ, ಕದ್ರಿ ಮೇಳ, ಕುಂಬಳೆ-ಕಣಿಪುರ ಮೇಳ, ಮಂಗಳಾದೇವಿ ಮೇಳ ಸೇರಿದಂತೆ ಹಲವು ಪ್ರಸಿದ್ಧ ಮೇಳಗಳಲ್ಲಿ ಸೇವೆ ಸಲ್ಲಿಸಿರುವ ಅವರು ದೇಶ-ವಿದೇಶಗಳಲ್ಲಿ ಅನೇಕ ಯಶಸ್ವಿ ಪ್ರದರ್ಶನಗಳನ್ನು ನೀಡಿದ್ದಾರೆ.‘ಕೋಟಿ-ಚೆನ್ನಯ’ ಯಕ್ಷಗಾನದ ಕೋಟಿ ಹಾಗೂ ‘ಕಾಡಮಲ್ಲಿಗೆ’ ಯಕ್ಷಗಾನದ ಮೈಂದ ಗುರಿಕಾರೆ ಪಾತ್ರಗಳ ಮೂಲಕ ಯಕ್ಷಾಭಿಮಾನಿಗಳ ಮನಗೆದ್ದಿದ್ದಾರೆ. ಕಲಾವಿದರಷ್ಟೇ ಅಲ್ಲದೆ ಸ್ವಂತ ಮೇಳ ನಡೆಸಿ ಯಜಮಾನರಾಗಿಯೂ ಗುರುತಿಸಿಕೊಂಡಿದ್ದಾರೆ.ಈ ಬಾರಿಯ ‘ಭ್ರಾಮರೀ ಯಕ್ಷಸೇವಾ ಪುರಸ್ಕಾರ’ವನ್ನು ಕಳೆದ ಮೂರು ದಶಕಗಳಿಂದ ಯಕ್ಷಗಾನದ ನೇಪಥ್ಯ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಮೋನಪ್ಪ ಗೌಡ ಹಾಗೂ 90 ವರ್ಷಗಳಿಗೂ ಅಧಿಕ ಕಾಲದಿಂದ ನಿರಂತರವಾಗಿ ಯಕ್ಷಗಾನ ತಾಳಮದ್ದಳೆ ಮತ್ತು ತರಬೇತಿ ಚಟುವಟಿಕೆಗಳನ್ನು ನಡೆಸುತ್ತಿರುವ ಮುಡಿಪು ಕುರ್ನಾಡಿನ ಶ್ರೀ ದತ್ತಾತ್ರೇಯ ಯಕ್ಷಗಾನ ಮತ್ತು ಭಜನಾಮಂಡಳಿ ಸಂಸ್ಥೆಗೆ ನೀಡಲಾಗುತ್ತಿದೆ. ಈ ಪುರಸ್ಕಾರವು ತಲಾ ರೂ. 6 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಹಿರಿಯ ಯಕ್ಷಗಾನ ಅರ್ಥಧಾರಿ ಜಿ.ಕೆ. ಭಟ್ ಸೇರಾಜೆ, ಶಾಸಕ ವೇದವ್ಯಾಸ ಕಾಮತ್, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ. ರಾಜಾರಾಮ್ ಭಟ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ ರಾಜಶೇಖರ ಕೋಟ್ಯಾನ್ ಹಾಗೂ ಪುಳಿಂಚ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ್ ಶೆಟ್ಟಿ ಪುಳಿಂಚ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.ಸಭಾ ಕಾರ್ಯಕ್ರಮದ ಬಳಿಕ ತೆಂಕುತಿಟ್ಟಿನ ಖ್ಯಾತ ಕಲಾವಿದರ ಸಮಾಗಮದಲ್ಲಿ ‘ಅಂಭಾಶಪಥ’, ‘ಲಕ್ಷ್ಮೀ ಸ್ವಯಂವರ’ ಹಾಗೂ ‘ತಾಮ್ರಧ್ವಜ ಕಾಳಗ’ ಪ್ರಸಂಗಗಳ ಯಕ್ಷಗಾನ ಪ್ರದರ್ಶನ ಉಚಿತವಾಗಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.