ಬೆಂಗಳೂರು: ಕುಟುಂಬ ಆಸ್ತಿ ವಿವಾದಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ತಾತನು ಸ್ವತಃ ಸಂಪಾದಿಸಿದ ಆಸ್ತಿಯು ನಂತರ ಕುಟುಂಬ ವಿಭಜನೆಯ ಮೂಲಕ ತಂದೆಯ ಪಾಲಿಗೆ ಬಂದರೆ, ಅದು ತಂದೆಯ ವೈಯಕ್ತಿಕ ಆಸ್ತಿಯಾಗುತ್ತದೆ ಹೊರತು ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇಂತಹ ಆಸ್ತಿಯಲ್ಲಿ ಮೊಮ್ಮಕ್ಕಳು ಅಥವಾ ಮೊಮ್ಮಗಳು ಸ್ವಯಂ ಕಾನೂನಾತ್ಮಕ ಪಾಲು ಕೇಳಲು ಅವಕಾಶವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ಪೀಠವು ಅಮೆರಿಕದಲ್ಲಿ ನೆಲೆಸಿರುವ ಉಷಾ ಎನ್. ಸ್ವಾಮಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ ಈ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ದಾಖಲೆಗಳು ಮತ್ತು ವಾದ-ಪ್ರತಿವಾದಗಳನ್ನು ಪರಿಶೀಲಿಸಿದ ನ್ಯಾಯಪೀಠ, ವಿವಾದಿತ ಆಸ್ತಿಗಳು ಅರ್ಜಿದಾರರ ತಾತನ ಸ್ವಯಂ ಸಂಪಾದಿತ ಆಸ್ತಿಗಳಾಗಿದ್ದವು ಎಂದು ಗಮನಿಸಿದೆ. ತಾತ ಅವರು ಕುಟುಂಬ ಒಪ್ಪಂದದ ಮೂಲಕ ಮಕ್ಕಳ ನಡುವೆ ಆಸ್ತಿಯನ್ನು ಹಂಚಿಕೆ ಮಾಡಿದ್ದು, ಆ ಭಾಗವಾಗಿ ತಂದೆಗೆ ಬಂದ ಆಸ್ತಿ ಅವರ ವೈಯಕ್ತಿಕ ಆಸ್ತಿಯಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮಿತಾಕ್ಷರ ಹಿಂದೂ ಕಾನೂನಿನ ಪ್ರಕಾರ, ಒಬ್ಬ ವ್ಯಕ್ತಿಗೆ ತನ್ನ ಸ್ವಯಾರ್ಜಿತ ಆಸ್ತಿಯನ್ನು ತನ್ನ ಇಚ್ಛೆಯಂತೆ ಯಾರಿಗಾದರೂ ನೀಡುವ ಅಥವಾ ವಿಲೇವಾರಿ ಮಾಡುವ ಸಂಪೂರ್ಣ ಹಕ್ಕು ಇದೆ. ಈ ಆಸ್ತಿಗಳು ಹಿಂದೂ ಅವಿಭಕ್ತ ಕುಟುಂಬದ (HUF) ಆಸ್ತಿಗಳಾಗಿದ್ದವು ಎಂಬುದನ್ನು ಸಾಬೀತುಪಡಿಸಲು ಅರ್ಜಿದಾರರು ಸಮರ್ಪಕ ಸಾಕ್ಷ್ಯ ಒದಗಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಪೀಠ ತಿಳಿಸಿದೆ.
ಹೀಗಾಗಿ, ತಾತನ ಸ್ವಯಂ ಸಂಪಾದಿತ ಆಸ್ತಿಯಲ್ಲಿ ವಿಭಜನೆಯ ನಂತರ ತಂದೆಗೆ ಬಂದ ಭಾಗವನ್ನು ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆ ಆಸ್ತಿಯಲ್ಲಿ ಮೊಮ್ಮಗಳಿಗೆ ಕಾನೂನಾತ್ಮಕ ಹಕ್ಕು ಇರುವುದಿಲ್ಲ ಎಂದು ಸ್ಪಷ್ಟಪಡಿಸಿ, ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ.
ಪಿತ್ರಾರ್ಜಿತ ಆಸ್ತಿ ಎಂದರೇನು?
ಕಾನೂನಿನ ಪ್ರಕಾರ, ಒಂದು ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸಲು ಅದು ಮುತ್ತಾತ, ತಾತ, ತಂದೆ ಮತ್ತು ಮಗ ಅಥವಾ ಮಗಳು ಸೇರಿ ಸತತ ನಾಲ್ಕು ತಲೆಮಾರುಗಳವರೆಗೆ ವಿಭಜನೆಯಾಗದೆ ವಂಶಪಾರಂಪರ್ಯವಾಗಿ ಬಂದಿರಬೇಕು. ಇಂತಹ ಆಸ್ತಿಯಲ್ಲಿ ಮಗು ಜನಿಸಿದ ಕ್ಷಣದಿಂದಲೇ ಪಾಲುದಾರಿಕ ಹಕ್ಕು ಉಂಟಾಗುತ್ತದೆ.
ಇದಕ್ಕೆ ವಿರುದ್ಧವಾಗಿ, ಸ್ವಯಂ ಸಂಪಾದಿತ ಆಸ್ತಿ ಎಂದರೆ ವ್ಯಕ್ತಿಯ ಸ್ವಂತ ದುಡಿಮೆ ಅಥವಾ ಆದಾಯದಿಂದ ಪಡೆದ ಆಸ್ತಿ. ಇಂತಹ ಆಸ್ತಿಯನ್ನು ಆ ವ್ಯಕ್ತಿ ತನ್ನ ಇಚ್ಛೆಯಂತೆ ಯಾರಿಗೆ ಬೇಕಾದರೂ ನೀಡಬಹುದು ಅಥವಾ ವಿಲೇವಾರಿ ಮಾಡಬಹುದು.
ಕುಟುಂಬ ಆಸ್ತಿ ವಿವಾದಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ಈ ತೀರ್ಪು, ಸ್ವಯಾರ್ಜಿತ ಆಸ್ತಿ ಮತ್ತು ಪಿತ್ರಾರ್ಜಿತ ಆಸ್ತಿಯ ನಡುವಿನ ವ್ಯತ್ಯಾಸವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, ಮುಂದಿನ ಪ್ರಕರಣಗಳಿಗೂ ಮಾರ್ಗದರ್ಶಕವಾಗುವ ಸಾಧ್ಯತೆ ಇದೆ.