ಸುರತ್ಕಲ್, ಜೂ.17: ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸುವ ಯಾವುದೇ ಪ್ರಸ್ತಾಪವನ್ನು ವಿರೋಧಿಸಿ ಹಾಗೂ ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ (ಸಿಎಚ್‌ಸಿ) ಮೇಲ್ದರ್ಜೆಗೆ ಏರಿಸುವಂತೆ ಆಗ್ರಹಿಸಿ ಸುರತ್ಕಲ್ ಆರೋಗ್ಯ ಕೇಂದ್ರದ ಮುಂಭಾಗ ಬುಧವಾರ ಬೃಹತ್ ಮಾನವ ಸರಪಳಿ ಪ್ರತಿಭಟನೆ ನಡೆಯಿತು.
ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ, ಸುರತ್ಕಲ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹತ್ತಕ್ಕೂ ಹೆಚ್ಚು ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ರಾಜಕೀಯ, ಸಾಮಾಜಿಕ, ಕಾರ್ಮಿಕ, ಯುವಜನ ಹಾಗೂ ನಾಗರಿಕ ಸಂಘಟನೆಗಳ ಸದಸ್ಯರು ಭಾಗವಹಿಸಿ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಸರ್ಕಾರಿ ಆಸ್ಪತ್ರೆಗಳು ಬಡವರು, ಮಧ್ಯಮ ವರ್ಗದವರು ಹಾಗೂ ದುರ್ಬಲ ವರ್ಗಗಳ ಜನರಿಗೆ ಜೀವನಾಡಿಯಾಗಿದ್ದು, ಅವುಗಳನ್ನು ಖಾಸಗಿ ಸಂಸ್ಥೆಗಳ ಅಧೀನಕ್ಕೆ ನೀಡುವುದರಿಂದ ಆರೋಗ್ಯ ಸೇವೆಗಳು ದುಬಾರಿಯಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣಗೊಂಡಿರುವ ಆರೋಗ್ಯ ಮೂಲಸೌಕರ್ಯಗಳು ಸಾರ್ವಜನಿಕ ಸೇವೆಗಾಗಿಯೇ ಉಳಿಯಬೇಕು ಎಂದು ಒತ್ತಾಯಿಸಿದರು.
ಸುರತ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಿ, ಹೆಚ್ಚಿನ ವೈದ್ಯರು, ತಜ್ಞ ವೈದ್ಯರು, ಹಾಸಿಗೆ ಸೌಲಭ್ಯ ಮತ್ತು ತುರ್ತು ಚಿಕಿತ್ಸಾ ವ್ಯವಸ್ಥೆಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಜಾತಿ, ಧರ್ಮ, ಮತ ಹಾಗೂ ರಾಜಕೀಯ ಪಕ್ಷಗಳ ಭೇದವಿಲ್ಲದೆ ವಿವಿಧ ಸಮುದಾಯಗಳ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಆರೋಗ್ಯದ ವಿಚಾರದಲ್ಲಿ ಸಮಾಜದ ಎಲ್ಲ ವರ್ಗಗಳೂ ಒಂದೇ ವೇದಿಕೆಯಲ್ಲಿ ನಿಂತಿರುವುದು ಸಾರ್ವಜನಿಕ ಹಿತಾಸಕ್ತಿಯ ಪ್ರತೀಕವಾಗಿದೆ ಎಂದು ಸಂಘಟಕರು ಅಭಿಪ್ರಾಯಪಟ್ಟರು.
ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿ, ಸರ್ಕಾರಿ ಆರೋಗ್ಯ ಸೇವೆಗಳ ಬಲವರ್ಧನೆಗಾಗಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಾರ್ವಜನಿಕರ ಈ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸುರತ್ಕಲ್ ಜನರ ಆರೋಗ್ಯ ಹಕ್ಕು ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆ ಮತ್ತು ಆರೋಗ್ಯ ಸೇವೆಗಳ ವಿಸ್ತರಣೆ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.