ಮಂಗಳೂರು, ಜೂನ್ 16: ಡೀಸೆಲ್ ಬೆಲೆಯಲ್ಲಿ ಈಗಾಗಲೇ ಸುಮಾರು ₹9 ರಷ್ಟು ಏರಿಕೆಯಾಗಿರುವುದರಿಂದ ಖಾಸಗಿ ಬಸ್ ಉದ್ಯಮ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಇದರ ನೇರ ಪರಿಣಾಮ ಬಸ್ ಮಾಲಕರು ಹಾಗೂ ನೌಕರರ ಮೇಲೆ ಬೀಳುತ್ತಿದೆ ಎಂದು ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘದ ಅಧ್ಯಕ್ಷ ಉಸ್ಮಾನ್ ಅಲ್ತಾಫ್ ತಿಳಿಸಿದ್ದಾರೆ.
ಪ್ರಯಾಣಿಕರ ಮೇಲೆ ಹೆಚ್ಚಿನ ಹೊರೆ ಬೀಳದ ರೀತಿಯಲ್ಲಿ ಕೇವಲ ₹1 ರಿಂದ ₹3 ರವರೆಗೆ ಮಾತ್ರ ಬಸ್ ಟಿಕೆಟ್ ದರವನ್ನು ಪರಿಷ್ಕರಿಸುವ ಮೂಲಕ ಖಾಸಗಿ ಬಸ್ ಉದ್ಯಮಕ್ಕೆ ಸ್ವಲ್ಪ ಮಟ್ಟಿನ ರಕ್ಷಣೆ ಒದಗಿಸಲು ಬಸ್ ಮಾಲಕರು ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರು ಹೇಳಿದರು.
ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಜಾರಿಯಲ್ಲಿರುವುದರಿಂದ ಖಾಸಗಿ ಬಸ್ ಸೇವೆಯ ಆದಾಯದ ಮೇಲೆ ಮತ್ತಷ್ಟು ಪರಿಣಾಮ ಉಂಟಾಗಿದೆ. ಇದರಿಂದ ಖಾಸಗಿ ಬಸ್ ಉದ್ಯಮ ನಡೆಸುವುದು ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದರ ಜೊತೆಗೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ವಿವಿಧ ಕ್ಷೇತ್ರಗಳಲ್ಲಿ ದರ ಪರಿಷ್ಕರಣೆ ನಡೆದಿರುವುದು ಸಾಮಾನ್ಯ ಸಂಗತಿಯಾಗಿದೆ. ಅದೇ ರೀತಿ ಖಾಸಗಿ ಬಸ್ ಕ್ಷೇತ್ರದಲ್ಲಿಯೂ ಸಣ್ಣ ಪ್ರಮಾಣದ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಕಡೆ ರಿಕ್ಷಾ ಸೇವೆಗಳು ನಿಗದಿತ ಪಾರ್ಕಿಂಗ್ ವ್ಯವಸ್ಥೆಯನ್ನು ಪಾಲಿಸದೇ, ಬಸ್ ನಿಲ್ದಾಣಗಳ ಸಮೀಪದಲ್ಲೇ ಕಡಿಮೆ ದರದಲ್ಲಿ ಪ್ರಯಾಣಿಕರನ್ನು ಸಾಗಿಸುವುದರಿಂದ ನಿಯಮಬದ್ಧವಾಗಿ ದುಡಿಯುತ್ತಿರುವ ರಿಕ್ಷಾ ಚಾಲಕರು ಹಾಗೂ ನಿಗದಿತ ಮಾರ್ಗದಲ್ಲಿ ಸೇವೆ ಸಲ್ಲಿಸುವ ಖಾಸಗಿ ಬಸ್ ಸಿಬ್ಬಂದಿಗೆ ತೊಂದರೆ ಉಂಟಾಗುತ್ತಿದೆ ಎಂದು ಅವರು ದೂರಿದರು.
ಈ ಎಲ್ಲಾ ಸಮಸ್ಯೆಗಳನ್ನು ರಿಕ್ಷಾ ಯೂನಿಯನ್, ಖಾಸಗಿ ಬಸ್ ನೌಕರರ ಸಂಘ, ಬಸ್ ಮಾಲಕರ ಸಂಘ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಎಲ್ಲರಿಗೂ ನ್ಯಾಯ ಸಿಗುವಂತೆ ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸುಗಮವಾಗಿ ಸಾಗುವಂತೆ ಸೂಕ್ತ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಉಸ್ಮಾನ್ ಅಲ್ತಾಫ್ ಮನವಿ ಮಾಡಿದ್ದಾರೆ.
