ಉಳ್ಳಾಲ: : ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರ ಅನುಕೂಲಕ್ಕಾಗಿ ನೂತನ ಕುಡಿಯುವ ನೀರಿನ ಬಿಲ್ ಪಾವತಿ ಸ್ಕ್ಯಾನರ್ ವ್ಯವಸ್ಥೆಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು.
ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯ ಸತೀಶ್ ಶೆಟ್ಟಿ ಅವರು ನೀರಿನ ಬಿಲ್ಲನ್ನು ಸ್ಕ್ಯಾನ್ ಮಾಡಿ ಪಾವತಿಸುವ ಮೂಲಕ ಡಿಜಿಟಲ್ ಪಾವತಿ ವ್ಯವಸ್ಥೆಗೆ ಚಾಲನೆ ನೀಡಿದರು.
ಈ ನೂತನ ವ್ಯವಸ್ಥೆಯ ಮೂಲಕ ನಾಗರಿಕರು ತಮ್ಮ ನೀರಿನ ಬಿಲ್ಲಿನ ಮೇಲಿರುವ ಸ್ಕ್ಯಾನರ್ ಕೋಡ್ ಅನ್ನು ಬಳಸಿಕೊಂಡು ಸುಲಭವಾಗಿ ಹಾಗೂ ತ್ವರಿತವಾಗಿ ಪಾವತಿ ಮಾಡಬಹುದಾಗಿದೆ. ಇದರಿಂದ ಬಿಲ್ ಪಾವತಿ ಪ್ರಕ್ರಿಯೆ ಮತ್ತಷ್ಟು ಸರಳ, ಪಾರದರ್ಶಕ ಹಾಗೂ ಡಿಜಿಟಲೀಕರಣಗೊಳ್ಳಲಿದ್ದು, ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಧ್ಯಕ್ಷೆ ತಿಳಿಸಿದರು.
ಪಟ್ಟಣ ಪಂಚಾಯತ್ ಆಡಳಿತವು ಸಾರ್ವಜನಿಕ ಸೇವೆಗಳನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಮಹತ್ವದ ಹೆಜ್ಜೆಯಾದ ಈ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಶ್ರೀ ಪ್ರವೀಣ್ ಐ. ಬಗಂಬಿಲ, ಮುಖ್ಯಾಧಿಕಾರಿ, ಕಿರಿಯ ಅಭಿಯಂತರರು, ಮೆ. ಪ್ರಸನ್ನ ಟೆಕ್ನಾಲಜಿಯ ಅಧಿಕಾರಿಗಳು, ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.