ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಅಂಬಿಕಾರೋಡ್: ನೇತ್ರಾವತಿ ನದಿ ತಿರುವಿನ ಎತ್ತಿನಹೊಳೆ ಯೋಜನೆ ಹಿಂದೆ ಗುಪ್ತ ಕಾರ್ಯಸೂಚಿ ಅಡಗಿದ್ದು, ಜಿಲ್ಲೆಯ ಜನ ಸರಿಯಾಗಿ ಯೋಚಿಸದೆ ವಿರೋಧಿಸದಿದ್ದಲ್ಲಿ ಭವಿಷ್ಯದಲ್ಲಿ ಅನಾಹುತಗಳಿಗೆ ಸಿಲುಕುವುದರಲ್ಲಿ ಸಂಶಯವಿಲ್ಲ ಎಂದು ಸುರತ್ಕಲ್ ಎನ್‍ಐಟಿಕೆಯ ನಿವೃತ್ತ ಪ್ರೊ. ಎಸ್.ಜಿ.ಮಯ್ಯ ಎಚ್ಚರಿಕೆ ನೀಡಿದ್ದಾರೆ.
ಅವರು ದಕ್ಷಿಣ ವಲಯ ಮಂಗಳೂರು ಧರ್ಮಪ್ರಾಂತ್ಯ , ದಕ್ಷಿಣ ವಲಯ ಕೆಥೋಲಿಕ್ ಸಭಾ, ತೊಕ್ಕೊಟ್ಟು ವಾಸುಕೀ ಸೇವಾ ಸಂಘ , ತುಳುನಾಡು ರಕ್ಷಣಾ ವೇದಿಕೆ, ತೊಕ್ಕೊಟ್ಟು ವಿದ್ಯಾಗಣಪತಿ ರಾಮ ಸೇವಾ ಸಮಿತಿ ವತಿಯಿಂದ ಗುರುವಾರ ಕಾಪಿಕಾಡಿನ ಅಂಬಿಕಾರೋಡಿನಲ್ಲಿರುವ ಗಟ್ಟಿ ಸಮಾಜಭವನದಲ್ಲಿ ನಡೆದ ನೇತ್ರಾವತಿ ನದಿ ತಿರುವು ವಿರೋಧಿಸಿ ಸಮಾನ ಮನಸ್ಕರ ಚಿಂತನ-ಮಂತನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ನೇತ್ರಾವತಿ ನದಿ ತಿರುವು ಹೋರಾಟ ಸಮಿತಿಯ ಉಪಾಧ್ಯಕ್ಷ ಎಂ.ಜಿ.ಹೆಗ್ಡೆ, ವಕೀಲರಾದ ಪೃಥ್ವಿರಾಜ್ ರೈ ಯೋಜನೆಯ ಬಾಧಕಗಳ ಬಗ್ಗೆ ವಿವರಣೆ ನೀಡಿದರು.
ಯೋಗೀಶ್ ಶೆಟ್ಟಿ ಜೆಪ್ಪು ಸ್ವಾಗತಿಸಿದರು. ಹರೀಶ್ ಪಿಲಾರ್ ಕಾರ್ಯಕ್ರಮ ನಿರೂಪಿಸಿದರು. ಅಜಿತ್ ಕುಮಾರ್ ಉಳ್ಳಾಲ್ ವಂದಿಸಿದರು.
ಬಾಕ್ಸ್
ನಾನೇ ಯೋಜನೆ ತಯಾರಿಸಲು ಸಿದ್ಧ :
ಬರ ಪೀಡಿತ ಪ್ರದೇಶಗಳಿಗೆ 13,000 ಕೋಟಿ ರೂ ವಿನಿಯೋಗಿಸಿ ಕುಡಿಯುವ ನೀರು ಪೂರೈಕೆ ಮಾಡಬೇಕೆಂದೇನಿಲ್ಲ. ಮಾರ್ಗ ಬದಿಯಲ್ಲೇ ಪೈಪನ್ನು ಅಳವಡಿಸುವುದರೊಂದಿಗೆ ಪಶ್ಚಿಮ ಘಟ್ಟ ಹಾಳಾಗದಂತೆ ಕೇವಲ 1,000 ಕೋಟಿಯಲ್ಲಿ ಯೋಜನೆ ನಾನು ರೂಪಿಸಲು ಸಿದ್ಧ ಎಂದು ಹೇಳಿದ ಮಯ್ಯ ಅವರು ಇದರಲ್ಲಿ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು. ಯಾವುದೇ ಕೈಗಾರಿಕಾ ವಲಯಗಳಿಗೆ ಕೊಡುವ ಯೋಜನೆಯನ್ನು ಇದರಲ್ಲಿ ರೂಪಿಸಲಾಗದು ಎಂದರು.