Site icon Ullalavani

ಇರಾ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನ ಮತ್ತು ಶಿಕ್ಷಣ ತರಬೇತಿ ಕಾರ್ಯಗಾರ

ಉಳ್ಳಾಲ, ಜೂನ್ 13: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾನಿಧಿ ಟ್ರಸ್ಟ್, ಉಳ್ಳಾಲ ತಾಲೂಕು ಹಾಗೂ ಇರಾ ಗ್ರಾಮ ಪಂಚಾಯತ್ ಇವರ ಜಂಟಿ ಆಶ್ರಯದಲ್ಲಿ ಇರಾ ತಾಲಿತ್ತಬೆಟ್ಟು ದ.ಕ. ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ಸಂವಿಧಾನ ಮತ್ತು ಶಿಕ್ಷಣ ಕುರಿತ ತರಬೇತಿ ಕಾರ್ಯಗಾರವನ್ನು ಶನಿವಾರ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಇರಾ ಗ್ರಾಮ ಪಂಚಾಯತ್ ಕಾರ್ಯದರ್ಶಿ ದಿನೇಶ್ ಕುಮಾರ್ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಇಸ್ಮಾಯಿಲ್ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಆದಿ ದ್ರಾವಿಡ ಸಮಾಜ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ್ ಅರ್ಬಿಗುಡ್ಡೆ ಅವರು ಪ್ರಸಕ್ತ ಸಮಾಜದಲ್ಲಿ ಸಂವಿಧಾನದ ಮಹತ್ವ ಹಾಗೂ ಶಿಕ್ಷಣದ ಅಗತ್ಯತೆಯ ಕುರಿತು ಮಾತನಾಡಿದರು.

ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಯಾದವ ಅಸ್ಸೈಗೋಳಿ ಅಧ್ಯಕ್ಷತೆ ವಹಿಸಿ, ಟ್ರಸ್ಟ್‌ನ ವಿವಿಧ ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ತದನಂತರ ಉಪನ್ಯಾಸಕ ರಘು ಧರ್ಮಸೇನಾ ಅವರು ವಿದ್ಯಾರ್ಥಿಗಳಿಗೆ ಸಂವಿಧಾನ ಮತ್ತು ಶಿಕ್ಷಣದ ಕುರಿತು ವಿಶೇಷ ತರಬೇತಿ ನೀಡಿದರು. ಸಂವಿಧಾನದ ಮೂಲ ಆಶಯಗಳು, ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷೆ ಪ್ರಮೀಳಾ ಶೆಟ್ಟಿ, ಸದಸ್ಯರಾದ ವಿಶ್ವನಾಥ್ ಕುಲಾಲ್, ಸುರೇಶ್, ಅಬ್ದುಲ್ ರಹಿಮಾನ್, ಸಮಾಜಸೇವಕ ಚಂದ್ರಹಾಸ್ ಬೋಳಿಯಾರ್, ಶಾಲಾ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version