Site icon Ullalavani

ಉಳ್ಳಾಲವಾಣಿ ಬಹಿರಂಗಪಡಿಸಿದ್ದ ಸಮಸ್ಯೆಗೆ ಸ್ಪಂದನೆ: ವಾಣಿಜ್ಯ ಕಟ್ಟಡಗಳಿಗೆ ನೋಟಿಸ್ ಜ್ಯಾರಿ ಮಾಡಿ ಸಭೆ ಕರೆದ ಮುನ್ನೂರು ಗ್ರಾಮ ಪಂಚಾಯತ್

ಮುನ್ನೂರು, ಜೂನ್ 12: ಹಲವು ದಿನಗಳಿಂದ ಸಾರ್ವಜನಿಕರ ಹಾಗೂ ಶಾಲಾ ಆಡಳಿತ ಮಂಡಳಿಯ ಆತಂಕಕ್ಕೆ ಕಾರಣವಾಗಿದ್ದ ಕುತ್ತಾರು ಪದವು ಪ್ರದೇಶದ ಕೊಳಚೆ ನೀರಿನ ಸಮಸ್ಯೆಯ ಬಗ್ಗೆ ಕೊನೆಗೂ ಮುನ್ನೂರು ಗ್ರಾಮ ಪಂಚಾಯತ್ ಎಚ್ಚೆತ್ತುಕೊಂಡಿದೆ. ಸಾರ್ವಜನಿಕ ಮಳೆನೀರು ಚರಂಡಿಗೆ ಕೊಳಚೆ ನೀರು ಹರಿಯುತ್ತಿರುವ ಕುರಿತು ಬಂದ ದೂರುಗಳ ಆಧಾರದ ಮೇಲೆ ಪಂಚಾಯತ್ ಸಭೆ ಕರೆಯುವ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಮುನ್ನೂರು ಮುಖ್ಯೋಪಾಧ್ಯಾಯಿನಿ ಹಾಗೂ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರು ಸಲ್ಲಿಸಿದ ದೂರು ಅರ್ಜಿಗಳ ಹಿನ್ನೆಲೆಯಲ್ಲಿ ಪಂಚಾಯತ್ ಈ ಕ್ರಮ ಕೈಗೊಂಡಿದೆ. ಶಾಲೆಯ ಹಿಂಭಾಗದಲ್ಲಿರುವ ಸಾರ್ವಜನಿಕ ಚರಂಡಿಗೆ ಸುತ್ತಮುತ್ತಲಿನ ಕೆಲವು ಅಪಾರ್ಟ್‌ಮೆಂಟ್ ಹಾಗೂ ಕಟ್ಟಡಗಳಿಂದ ಕೊಳಚೆ ನೀರು ಹರಿಯುತ್ತಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಶಾಲಾ ಪರಿಸರದಲ್ಲಿ ದುರ್ವಾಸನೆ, ಅಸ್ವಚ್ಛತೆ ಹಾಗೂ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದರು. ವಿಶೇಷವಾಗಿ ಮಳೆಗಾಲದಲ್ಲಿ ಈ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇರುವುದರಿಂದ ತ್ವರಿತ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದರು.

ಈ ಹಿನ್ನೆಲೆಯಲ್ಲಿ ಮುನ್ನೂರು ಗ್ರಾಮ ಪಂಚಾಯತ್ ದಿನಾಂಕ 15-06-2026 ರಂದು ಪೂರ್ವಾಹ್ನ 11 ಗಂಟೆಗೆ ಸಭೆ ಕರೆಯಿದ್ದು, ಸಂಬಂಧಪಟ್ಟ ಕಟ್ಟಡಗಳಾದ ಒಪೇರಾ/ಒಲಿಂಪಸ್ ಪ್ಲಾಟ್, ಗೋಲ್ಡನ್ ರೋಸ್, ಶಾಸನ್ ಕಟ್ಟಡ, ಯುವರ್ ನೆಸ್ಟ್ ಕಟ್ಟಡ ಹಾಗೂ ಸಮೃದ್ಧಿ ರೆಸಿಡೆನ್ಸಿ ಪ್ರತಿನಿಧಿಗಳು ಕಡ್ಡಾಯವಾಗಿ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ಪಂಚಾಯತ್‌ನ ಈ ಕ್ರಮವನ್ನು ಸ್ಥಳೀಯರು ಸ್ವಾಗತಿಸಿದ್ದು, ಸಭೆಯ ನಂತರ ಕೇವಲ ಚರ್ಚೆಗೆ ಸೀಮಿತವಾಗದೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾನೂನುಬದ್ಧ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಸಾರ್ವಜನಿಕ ಆರೋಗ್ಯ, ಶಾಲಾ ಮಕ್ಕಳ ಸುರಕ್ಷತೆ ಹಾಗೂ ಪರಿಸರ ಸಂರಕ್ಷಣೆ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು. ದೂರುಗಳು ಬಂದ ಬಳಿಕವಾದರೂ ಗ್ರಾಮ ಪಂಚಾಯತ್ ಸ್ಪಂದಿಸಿರುವುದು ಶ್ಲಾಘನೀಯ. ಆದರೆ ನಿಜವಾದ ಯಶಸ್ಸು ಸಮಸ್ಯೆಯ ಮೂಲವನ್ನು ಪತ್ತೆಹಚ್ಚಿ, ಕೊಳಚೆ ನೀರು ಸಾರ್ವಜನಿಕ ಚರಂಡಿಗೆ ಹರಿಯುವುದನ್ನು ಸಂಪೂರ್ಣವಾಗಿ ತಡೆಯುವಲ್ಲಿ ಇದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

Exit mobile version