Site icon Ullalavani

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಅಜ್ಜಿನಡ್ಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ವಿತರಣೆ

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಅಜ್ಜಿನಡ್ಕ ಇಲ್ಲಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ, ಲೇಖನ ಸಾಮಗ್ರಿಗಳನ್ನು ಕೊಡುಗೆ ನೀಡಲಾಯಿತು.

ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರಾದ ಸುರೇಖಾ ಚಂದ್ರಹಾಸ್ ಮಾತನಾಡಿ, ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಮುತುವರ್ಜಿ ವಹಿಸಿ ಆರು ವರ್ಷಗಳಿಂದ ಸರಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಸೊಸೈಟಿಯ ವತಿಯಿಂದ ವಿದ್ಯಾರ್ಥಿಗಳಿಗೆ ಕಲಿಯುವ ಸಾಮಗ್ರಿಗಳ ವಿತರಣೆ ಮಾಡಲಾಗಿದೆ. ಅಂಗ್ಲಮಾಧ್ಯಮ ಶಿಕ್ಷಣಕ್ಕೆ ಮಾರು ಹೋಗುತ್ತಿರುವ ಈಗಿನ ಸಂದರ್ಭದಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ಉದ್ದೇಶದಿಂದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ಸೇವೆ ಒದಗಿಸುತ್ತಿದೆ. ಹೆತ್ತವರು ಮಕ್ಕಳಿಗೆ ಆಸ್ತಿ ಮಾಡದಿದ್ದರೂ ಪರವಾಗಿಲ್ಲ, ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿಸಿ ಎಂದು ಆಶಯ ವ್ಯಕ್ತಪಡಿಸಿದರು.

ಸಂಘದ ನಿರ್ದೇಶಕರಾದ ರಾಘವ ಆರ್ ಉಚ್ಚಿಲ್ ಮಾತನಾಡಿ, ಸಂಘದ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಅವರ ನೇತೃತ್ವದಲ್ಲಿ ಸಂಘವು ಉನ್ನತ ಸಾಧನೆ ಮಾಡಿದ್ದು, ಉತ್ತಮ ಲಾಭ ಗಳಿಸುತ್ತಿದೆ. ಗಳಿಸಿದ ಲಾಭಾಂಶದಲ್ಲಿ ನಮ್ಮ ಸಂಘದ ವ್ಯಾಪ್ತಿಯ ಸರಕಾರಿ ಶಾಲೆಗೆ ಮತ್ತು ವಿದ್ಯಾರ್ಥಿಗಳಿಗೆ ನೆರವು ನೀಡಬೇಕೆನ್ನೆವುದು ನಮ್ಮ ಆಶಯ. ಅದರಂತೆ ಈ ಶಾಲೆಯ ಮಕ್ಕಳಿಗೆ ಕಲಿಕೋಪಕರಣಗಳನ್ನು ವಿತರಿಸಿದ್ದೇವೆ. ಮಕ್ಕಳು ಇದರ ಸದುಪಯೋಗ ಪಡೆದು ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ಶುಭ ಹಾರೈಸಿದರು.
ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಅಬುಸಾಲಿ ಅಧ್ಯಕ್ಷತೆ ವಹಿಸಿದ್ದರು.
ನಿರ್ದೇಶಕರಾದ ಉದಯಕುಮಾರ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್ ಉಳ್ಳಾಲ, ಶಾಲಾ ಮುಖ್ಯ್ಯೋಪಾಧ್ಯಯಿನಿ ರಜಿಯಾ, ಕಂಬಳ ಓಟಗಾರ ವಂದಿತ್ ಶೆಟ್ಟಿ, ಅಹಮದ್ ಅಜ್ಜಿನಡ್ಕ, ಸಿ. ಆರ್. ಪಿ ಮೋಹನ್, ಸುಜಾತಾ, ಗೀತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯ್ಯೋಪಾಧ್ಯಾಯಿನಿ ರಜಿಯಾ ಕಾರ್ಯಕ್ರಮ ನಿರೂಪಿಸಿದರು.

Exit mobile version