ಅಮೇರಿಕಾ, ಜೂ. 11: ಭಾರತದ ಪ್ರಧಾನಿಯಾಗಿ ಅತ್ಯಂತ ದೀರ್ಘ ಅವಧಿಗೆ ಸೇವೆ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿನಂದನೆ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ಪ್ರಧಾನಿ ಮೋದಿ ಅವರನ್ನು ತಮ್ಮ ಆತ್ಮೀಯ ಸ್ನೇಹಿತ ಹಾಗೂ ಮಹಾನ್ ನಾಯಕ ಎಂದು ಬಣ್ಣಿಸಿದ್ದಾರೆ. “ಭಾರತದ ಪ್ರಧಾನಿಯಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಅವರು ಒಬ್ಬ ಮಹಾನ್ ವ್ಯಕ್ತಿ,” ಎಂದು ಟ್ರಂಪ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಇದೇ ವೇಳೆ, ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದ ಟ್ರಂಪ್, “ಪ್ರಧಾನಿ ಮೋದಿ ಬಲಶಾಲಿ, ಆರೋಗ್ಯವಂತ ಮತ್ತು ಅತ್ಯಂತ ಬುದ್ಧಿವಂತ ವ್ಯಕ್ತಿ. ಮುಂದಿನ ವರ್ಷಗಳಲ್ಲಿಯೂ ಅವರಿಗೆ ಇನ್ನಷ್ಟು ಯಶಸ್ಸು ಮತ್ತು ಸಾಧನೆಗಳು ದೊರೆಯಲಿ,” ಎಂದು ಶುಭ ಹಾರೈಸಿದ್ದಾರೆ.ಪ್ರಧಾನಿ ಮೋದಿ ಅವರು ಸತತವಾಗಿ 4,399 ದಿನಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸುವ ಮೂಲಕ, ಭಾರತದ ಮೊದಲ ಚುನಾಯಿತ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಅವರ 4,398 ದಿನಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಇದರೊಂದಿಗೆ ದೇಶದ ಇತಿಹಾಸದಲ್ಲಿ ಅತ್ಯಧಿಕ ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಚುನಾಯಿತ ನಾಯಕ ಎಂಬ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ಟ್ರಂಪ್ ಅವರ ಅಭಿನಂದನಾ ಸಂದೇಶಕ್ಕೆ ಪ್ರತಿಕ್ರಿಯಿಸಿದ ಮೋದಿ, ಧನ್ಯವಾದಗಳನ್ನು ತಿಳಿಸಿ, ಭಾರತ–ಅಮೆರಿಕ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸಲು ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.ಇದರ ಜೊತೆಗೆ, ವಿಶ್ವದ ಹಲವು ರಾಷ್ಟ್ರಗಳ ನಾಯಕರು ಹಾಗೂ ಗಣ್ಯರು ಪ್ರಧಾನಿ ಮೋದಿಗೆ ಶುಭಾಶಯಗಳನ್ನು ಸಲ್ಲಿಸಿದ್ದು, ಅವರ ನಾಯಕತ್ವ ಮತ್ತು ದೀರ್ಘಕಾಲದ ಸಾರ್ವಜನಿಕ ಸೇವೆಯನ್ನು ಮೆಚ್ಚಿಕೊಂಡಿದ್ದಾರೆ.