Site icon Ullalavani

ಉರ್ವಾ ಸಂತ ಅಲೋಶಿಯಸ್ ಶಾಲೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

ಮಂಗಳೂರು, ಜೂನ್ 11: ಉರ್ವಾದ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ 2026-27ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಶಾಲಾ ಮಂತ್ರಿಮಂಡಲದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಉರ್ವಾ ಇಮ್ಯಾಕ್ಯುಲೇಟ್ ಚರ್ಚ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಶಾಲೆಯ ಸಂಚಾಲಕರು ಹಾಗೂ ಉರ್ವಾ ಇಮ್ಯಾಕ್ಯುಲೇಟ್ ಚರ್ಚಿನ ಧರ್ಮಗುರುಗಳಾದ ವಂ. ಗುರು ಬೆಂಜಮಿನ್ ಪಿಂಟೋ ಅವರು ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿ, “ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ದಕ್ಷತೆಯಿಂದ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ಶಾಲೆ ಹಾಗೂ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತಾಗಲಿ” ಎಂದು ಹಾರೈಸಿದರು.

ಶಾಲೆಯ ಮುಖ್ಯ ಶಿಕ್ಷಕರಾದ ಅಲೋಶಿಯಸ್ ಡಿಸೋಜಾ ಅವರು ಮಾತನಾಡಿ, ಆಯ್ಕೆಯಾದ ನಾಯಕರು ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕತೆ, ಶಿಸ್ತು ಮತ್ತು ಜವಾಬ್ದಾರಿಯುತವಾಗಿ ನಿರ್ವಹಿಸಬೇಕೆಂದು ತಿಳಿಸಿದರು.

ಶಾಲಾ ನಾಯಕನಾಗಿ 10ನೇ ತರಗತಿ ‘ಬಿ’ ವಿಭಾಗದ ಹರ್ಷವರ್ಧನ್ ಪ್ರತಿಜ್ಞಾವಿಧಿ ಬೋಧಿಸಿದರು. ಶಾಲಾ ಉಪನಾಯಕಿಯಾಗಿ 9ನೇ ತರಗತಿ ‘ಎ’ ವಿಭಾಗದ ಜೈನ್ ಜೆರುಶಾ ಪಿಂಟೊ ಹಾಗೂ ವಿರೋಧ ಪಕ್ಷದ ನಾಯಕರಾಗಿ 10ನೇ ತರಗತಿ ‘ಸಿ’ ವಿಭಾಗದ ಹಿಷಾಮ್ ಸೇರಿದಂತೆ ಇತರ ವಿದ್ಯಾರ್ಥಿ ನಾಯಕರು ಪ್ರಮಾಣ ವಚನ ಸ್ವೀಕರಿಸಿದರು.

ಕಾರ್ಯಕ್ರಮದ ಸಂಯೋಜನೆಯನ್ನು 10ನೇ ತರಗತಿಯ ಶಿಕ್ಷಕರು ವಹಿಸಿಕೊಂಡಿದ್ದರು. 9ನೇ ತರಗತಿ ‘ಎ’ ವಿಭಾಗದ ರಿಧಿ ದಾಮೋದರ್ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಸಮಾಪ್ತಿಯಾಯಿತು.

Exit mobile version