ಮಂಗಳೂರು ನಗರದಲ್ಲಿ ಇತ್ತೀಚೆಗೆ ನಡೆದ ಮಾದಕ ವಸ್ತು ಮಾರಾಟ ಜಾಲದ ಪತ್ತೆ ಮತ್ತು ಮೂವರು ಡ್ರಗ್ ಪೆಡ್ಲರ್‌ಗಳ ಬಂಧನದ ಘಟನೆ ಸಮಾಜವನ್ನು ಮತ್ತೊಮ್ಮೆ ಆತಂಕಕ್ಕೀಡು ಮಾಡಿದೆ. ಪೊಲೀಸರು ಎಂಡಿಎಂಎ (MDMA) ಸೇರಿದಂತೆ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿರುವುದು ಶ್ಲಾಘನೀಯ ಕಾರ್ಯ. ಆದರೆ ಪ್ರತಿಯೊಂದು ಬಂಧನದ ನಂತರವೂ ಸಮಾಜದ ಮುಂದೆ ಒಂದು ಮೂಲಭೂತ ಪ್ರಶ್ನೆ ಉಳಿಯುತ್ತದೆ. ಯುವಕರು ಮತ್ತು ವಿದ್ಯಾರ್ಥಿಗಳು ಮಾದಕ ವಸ್ತುಗಳ ಬಲೆಗೆ ಬೀಳುತ್ತಿರುವುದನ್ನು ತಡೆಯಲು ಸರ್ಕಾರ, ಶಿಕ್ಷಣ ಇಲಾಖೆ ಮತ್ತು ಸಮಾಜ ಯಾವ ಮಟ್ಟದಲ್ಲಿ ಕೆಲಸ ಮಾಡುತ್ತಿದೆ?
ಜಪಾನಿನ ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಯ ಮೂಲ ಕಾರಣವನ್ನು ಪತ್ತೆಹಚ್ಚಲು “5 WHY” ಎಂಬ ಸೂತ್ರವನ್ನು ಬಳಸಲಾಗುತ್ತದೆ. ಅಂದರೆ ಒಂದು ಸಮಸ್ಯೆಗೆ ಕೇವಲ ಮೇಲ್ನೋಟದ ಉತ್ತರ ಹುಡುಕದೆ, ಐದು ಬಾರಿ “ಯಾಕೆ?” ಎಂಬ ಪ್ರಶ್ನೆಯನ್ನು ಕೇಳುವ ಮೂಲಕ ಅದರ ಬೇರುಗಳನ್ನು ಹುಡುಕಲಾಗುತ್ತದೆ. ಇದೇ ವಿಧಾನವನ್ನು ಮಾದಕ ವಸ್ತುಗಳ ಸಮಸ್ಯೆಗೂ ಅನ್ವಯಿಸಿದರೆ, ಯುವಕರು ಮಾದಕ ವಸ್ತುಗಳತ್ತ ಆಕರ್ಷಿತರಾಗಲು ಕಾರಣವೇನು, ಅವರಿಗೆ ಅದರ ಅಪಾಯಗಳ ಬಗ್ಗೆ ಸಮರ್ಪಕ ಅರಿವು ಯಾಕಿಲ್ಲ, ಶಾಲಾ ಹಂತದಲ್ಲೇ ಪರಿಣಾಮಕಾರಿ ಜಾಗೃತಿ ಶಿಕ್ಷಣ ಯಾಕೆ ದೊರೆಯುತ್ತಿಲ್ಲ, ಪ್ರಾಥಮಿಕ ಪಠ್ಯಪುಸ್ತಕಗಳಲ್ಲಿ ಈ ವಿಷಯ ಕಡ್ಡಾಯವಾಗಿ ಯಾಕೆ ಸೇರಿಲ್ಲ ಮತ್ತು ಈ ಕುರಿತು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸುತ್ತಿಲ್ಲ ಯಾಕೆ ಎಂಬ ಪ್ರಶ್ನೆಗಳು ಎದುರಾಗುತ್ತವೆ.
ಇಂದು ದೇಶಾದ್ಯಂತ ಮಾದಕ ವಸ್ತುಗಳಿಗೆ ಸಂಬಂಧಿಸಿದ ಸಾವಿರಾರು ಪ್ರಕರಣಗಳು ದಾಖಲಾಗುತ್ತಿವೆ. ಪ್ರತಿಯೊಂದು ಪ್ರಕರಣದ ಹಿಂದೆ ಕೇವಲ ಕಾನೂನು ಉಲ್ಲಂಘನೆ ಮಾತ್ರವಲ್ಲ, ಮಾನಸಿಕ ಆರೋಗ್ಯ, ಒತ್ತಡ, ಖಿನ್ನತೆ, ಏಕಾಂಗಿ ಜೀವನ, ದುರ್ಬಲ ಸಾಮಾಜಿಕ ಸಂಪರ್ಕ ಮತ್ತು ತಪ್ಪು ಸ್ನೇಹ ಬಳಗಗಳಂತಹ ಗಂಭೀರ ಸಾಮಾಜಿಕ ಸಮಸ್ಯೆಗಳೂ ಅಡಗಿವೆ. ಆದ್ದರಿಂದ ಮಾದಕ ವಸ್ತುಗಳ ಸಮಸ್ಯೆಯನ್ನು ಕೇವಲ ಪೊಲೀಸ್ ಅಥವಾ ಕಾನೂನು ಸುವ್ಯವಸ್ಥೆಯ ವಿಷಯವಾಗಿ ನೋಡುವ ಬದಲು, ಮಾನಸಿಕ ಆರೋಗ್ಯದ ದೃಷ್ಟಿಕೋನದಿಂದಲೂ ವಿಶ್ಲೇಷಿಸುವ ಅಗತ್ಯವಿದೆ.
ಕೇಂದ್ರ ಸರ್ಕಾರ ಈಗಾಗಲೇ Mental Healthcare Act–2017 ಜಾರಿಗೆ ತಂದಿದೆ. ಆದರೆ ಶಾಲಾ ಹಂತದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಎಷ್ಟು ಪರಿಣಾಮಕಾರಿ ಶಿಕ್ಷಣ ನೀಡಲಾಗುತ್ತಿದೆ ಎಂಬ ಪ್ರಶ್ನೆ ಉಳಿದಿದೆ. ವಿದ್ಯಾರ್ಥಿಗಳಿಗೆ ಭಾವನಾತ್ಮಕ ಸಮತೋಲನ, ಒತ್ತಡ ನಿರ್ವಹಣೆ, ಆತ್ಮವಿಶ್ವಾಸ, ವ್ಯಸನದ ಅಪಾಯಗಳು, ಮಾನಸಿಕ ಆರೋಗ್ಯ ಸಮಸ್ಯೆಗಳ ಲಕ್ಷಣಗಳು ಹಾಗೂ ನೆರವು ಪಡೆಯುವ ಮಾರ್ಗಗಳ ಕುರಿತು ಕಡ್ಡಾಯ ಶಿಕ್ಷಣ ನೀಡಬೇಕಾಗಿದೆ. ಮಾನಸಿಕ ಆರೋಗ್ಯ ಶಿಕ್ಷಣವಿಲ್ಲದೆ ಮಾದಕ ವಸ್ತುಗಳ ವಿರುದ್ಧದ ಹೋರಾಟ ಸಂಪೂರ್ಣ ಯಶಸ್ವಿಯಾಗುವುದಿಲ್ಲ.
ಇಲ್ಲಿ ಮತ್ತೊಂದು ಮಹತ್ವದ ಪ್ರಶ್ನೆ ಉದ್ಭವಿಸುತ್ತದೆ. ದೇಶಪ್ರೇಮಿಗಳು, ಸಮಾಜಪ್ರೇಮಿಗಳು, ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಪೋಷಕರ ಸಂಘಟನೆಗಳು, ಶಾಸಕರು ಮತ್ತು ಸಂಸದರು ಈ ವಿಚಾರದಲ್ಲಿ ಸರ್ಕಾರವನ್ನು ಬಹಿರಂಗವಾಗಿ ಯಾಕೆ ಪ್ರಶ್ನಿಸುತ್ತಿಲ್ಲ? ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಪ್ರಾಥಮಿಕ ಶಿಕ್ಷಣದಲ್ಲೇ ಮಾದಕ ವಸ್ತುಗಳ ಜಾಗೃತಿ ಮತ್ತು ಮಾನಸಿಕ ಆರೋಗ್ಯ ಶಿಕ್ಷಣವನ್ನು ಕಡ್ಡಾಯಗೊಳಿಸುವ ಕುರಿತು ಎಷ್ಟು ಬಾರಿ ಚರ್ಚೆಯಾಗಿದೆ? ಯುವಜನತೆಯ ಭವಿಷ್ಯಕ್ಕೆ ಸಂಬಂಧಿಸಿದ ಈ ಗಂಭೀರ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆಯುವುದು ಅವರ ಕರ್ತವ್ಯವಲ್ಲವೇ?
ಸಾವಿರಾರು ಕೋಟಿ ರೂಪಾಯಿ ವೆಚ್ಚದ ಶಿಕ್ಷಣ ಇಲಾಖೆ ಮತ್ತು ಶಿಕ್ಷಣ ವ್ಯವಸ್ಥೆಯ ಉದ್ದೇಶ ಕೇವಲ ಪರೀಕ್ಷೆ ಮತ್ತು ಅಂಕಗಳಿಗೆ ಸೀಮಿತವಾಗಬಾರದು. ಸಮಾಜಕ್ಕೆ ಜವಾಬ್ದಾರಿಯುತ, ಆರೋಗ್ಯವಂತ ಮತ್ತು ಕಾನೂನು ಪಾಲಿಸುವ ನಾಗರಿಕರನ್ನು ರೂಪಿಸುವುದೂ ಅದರ ಪ್ರಮುಖ ಗುರಿಯಾಗಬೇಕು. ಶಿಕ್ಷಣ ಸಚಿವರು ಮತ್ತು ಶಿಕ್ಷಣ ಇಲಾಖೆ ಜಪಾನಿನ “5 WHY” ಸೂತ್ರವನ್ನು ಅಳವಡಿಸಿಕೊಂಡು ಮಾದಕ ವಸ್ತುಗಳ ಸಮಸ್ಯೆಯ ಮೂಲ ಕಾರಣಗಳನ್ನು ಪತ್ತೆಹಚ್ಚಿ ಶಾಶ್ವತ ಪರಿಹಾರದತ್ತ ಹೆಜ್ಜೆ ಇಡಬೇಕಾಗಿದೆ.
ಪ್ರತಿದಿನ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸುವ ಸುದ್ದಿಗಳು ಪ್ರಕಟವಾಗುವ ಬದಲು, ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರ ಉಳಿದಿದ್ದಾರೆ, ಮಾನಸಿಕವಾಗಿ ಸದೃಢರಾಗಿದ್ದಾರೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದಾರೆ ಎಂಬ ಸುದ್ದಿಗಳು ಬರಬೇಕಾದರೆ ಜಾಗೃತಿ ಹಾಗೂ ಮಾನಸಿಕ ಆರೋಗ್ಯ ಶಿಕ್ಷಣ ಶಾಲಾ ಹಂತದಿಂದಲೇ ಆರಂಭವಾಗಬೇಕು. ಆಗ ಮಾತ್ರ ಮಾದಕ ವಸ್ತು ಮುಕ್ತ, ಆರೋಗ್ಯವಂತ ಮತ್ತು ಸುರಕ್ಷಿತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.