Site icon Ullalavani

ಮಂಜನಾಡಿ ಗುಡ್ಡ ಕುಸಿತ ದುರಂತ ಪ್ರಕರಣಕ್ಕೆ ಹೊಸ ತಿರುವು: ತನಿಖೆಗೆ ಪೊಲೀಸ್ ಆಯುಕ್ತರ ಆದೇಶ – ಕೋಣಾಜೆ ಪೊಲೀಸರು ಆಯುಕ್ತರ ಜ್ಞಾಪನ ಪತ್ರದ ಆದೇಶ ಪಾಲಿಸುತ್ತಾರೋ?

ಮಂಗಳೂರು: ಮಂಜನಾಡಿಯಲ್ಲಿ ನಡೆದ ಭೀಕರ ಗುಡ್ಡ ಕುಸಿತ ದುರಂತ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಸಂತ್ರಸ್ತೆ ಆಶ್ವಿನಿ ಪೂಜಾರಿಯವರು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತರು, ಕೋಣಾಜೆ ಪೊಲೀಸ್ ಠಾಣೆಗೆ ಪ್ರಕರಣದ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜ್ಞಾಪನ ಪತ್ರದ ಮೂಲಕ ಆದೇಶ ನೀಡಿದ್ದಾರೆ.

ಈ ಬೆಳವಣಿಗೆಯ ಬಳಿಕ ಸಾರ್ವಜನಿಕ ವಲಯದಲ್ಲಿ ಇದೀಗ ಒಂದು ಪ್ರಮುಖ ಪ್ರಶ್ನೆ ಕೇಳಿಬರುತ್ತಿದೆ – “ಕೋಣಾಜೆ ಪೊಲೀಸರು ಪೊಲೀಸ್ ಆಯುಕ್ತರ ಜ್ಞಾಪನ ಪತ್ರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಮಗ್ರ ತನಿಖೆ ನಡೆಸುತ್ತಾರೆಯೇ?”

ಈ ಹಿಂದೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 105 ಮತ್ತು 106 ಅಡಿಯಲ್ಲಿ ದೂರು ನೀಡಲಾಗಿದ್ದರೂ, ಪ್ರಕರಣವನ್ನು ಕೇವಲ ಅಸಹಜ ಸಾವು (UDR) ಪ್ರಕರಣವಾಗಿ ದಾಖಲಿಸಲಾಗಿತ್ತು ಎಂಬ ಆರೋಪವಿದೆ. ಇದೇ ಕಾರಣಕ್ಕೆ ಸಂತ್ರಸ್ತೆ ಆಶ್ವಿನಿ ಪೂಜಾರಿಯವರು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ವಿವಿಧ ಅಧಿಕಾರಿಗಳಿಗೆ ಹಾಗೂ ನ್ಯಾಯಾಲಯಕ್ಕೂ ಮೊರೆ ಹೋಗಿದ್ದರು.

ಇದೀಗ NITK ಸಿವಿಲ್ ಇಂಜಿನಿಯರಿಂಗ್ ವಿಭಾಗದ ತಜ್ಞರ ವರದಿಯಲ್ಲಿ ಅವೈಜ್ಞಾನಿಕ ಕಾಮಗಾರಿಯೇ ಗುಡ್ಡ ಕುಸಿತಕ್ಕೆ ಕಾರಣ ಎಂದು ಉಲ್ಲೇಖವಾಗಿರುವ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಬೇಡಿಕೆ ಮತ್ತಷ್ಟು ಬಲ ಪಡೆದಿದೆ.

ಪೊಲೀಸ್ ಆಯುಕ್ತರ ಆದೇಶದ ನಂತರ ಕೋಣಾಜೆ ಪೊಲೀಸರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ, ತಾಂತ್ರಿಕ ವರದಿಯನ್ನು ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಾರೆಯೇ, ಅಥವಾ ಪ್ರಕರಣ ಹಿಂದಿನಂತೆಯೇ ಮುಂದುವರಿಯುತ್ತದೆಯೇ ಎಂಬುದನ್ನು ಸಾರ್ವಜನಿಕರು ಕುತೂಹಲದಿಂದ ಗಮನಿಸುತ್ತಿದ್ದಾರೆ.

ಗುಡ್ಡ ಕುಸಿತದಲ್ಲಿ ಇಬ್ಬರು ಮುಗ್ಧ ಮಕ್ಕಳು ಹಾಗೂ ಕುಟುಂಬದ ಸದಸ್ಯೆಯನ್ನು ಕಳೆದುಕೊಂಡ ಆಶ್ವಿನಿ ಪೂಜಾರಿಯವರ ಕುಟುಂಬಕ್ಕೆ ನ್ಯಾಯ ದೊರಕಿಸುವ ಜವಾಬ್ದಾರಿ ಈಗ ತನಿಖಾ ಸಂಸ್ಥೆಗಳ ಮೇಲಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

Exit mobile version