ಉಳ್ಳಾಲ: ಪರಿಸರ ದಿನ ಪ್ರಯುಕ್ತ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದ ಕೋಟೆಪುರ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯಲ್ಲಿ ‘ಏಕ್ ಪೇಡ್, ಮಾಕೇ ನಾಮ್’ ಕಾರ್ಯಕ್ರಮ ನಡೆಯಿತು.
ಪ್ರಾಥಮಿಕ ಶಾಲಾ ಮಕ್ಕಳಿಂದ ಒಣಕಸ, ಹಸಿಕಣ ನಿರ್ವಹಣೆ, ಪ್ಲಾಸ್ಟಿಕ್ ನಿಂದ ಪರಿಸರ, ಮಾನವ, ಪ್ರಾಣಿ, ಪಕ್ಷಿಗಳಿಗಾಗುವ ಅನಾಹುತಗಳ ಬಗ್ಗೆ ಕನ್ನಡ ಅಕ್ಷರ ಮಾಲೆ ಅ ದಿಂದ ಅಃ ವರೆಗೆ ಶ್ಲೋಗನ್ ಬಳಸಿ ಮೈಮ್ ಪ್ರದರ್ಶಿಸಿದರು.
ಅಧ್ಯಕ್ಷತೆ ವಹಿಸಿದ ಸಯ್ಯದ್ ಮದನಿ ದರ್ಗಾ ಪ್ರಭಾರ ಅಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ ಮಾತನಾಡಿ, ಶಿಕ್ಷಣಕ್ಕಾಗಿ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ತಿಂಗಳಿಗೆ ಸುಮಾರು 25 ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆ, ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಸಮಾಜದ ಜೊತೆ ಪರಿಸರಕ್ಕೂ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಮಂಗಳೂರು ದಕ್ಷಿಣ ವಲಯ ಎಚ್.ಆರ್.ಈಶ್ವರ್ ಉದ್ಘಾಟಿಸಿ, ಮುಂದಿನ ದಿನಗಳಲ್ಲಿ ತಾಪಮಾನ ತಡೆಯಬೇಕಾದರೆ ಈಗಲೇ ಗಿಡಗಳನ್ನು ನೆಡಬೇಕು. ಮನೆಯ ಪರಿಸರಲ್ಲಿ ನೆಟ್ಟ ಗಿಡಗಳಿಗೆ ಮನೆಯವರ ಹೆಸರಿಟ್ಟು ಪೋಷಿಸಬೇಕು ಎಂದರು.
ಜಿಲ್ಲಾ ಸ್ವಚ್ಚತಾ ರಾಯಭಾರಿ ಶೀನ ಶೆಟ್ಟಿ ಮಾತನಾಡಿ, ಮನೆಯಲ್ಲಿರುವಷ್ಟು ಮಂದಿಯ ಹೆಸರಲ್ಲಿ ಗಿಡ ನೆಟ್ಟರೆ ಅದೊಂದು ಮಾದರಿಯಾಗಲಿದೆ. ನಮ್ಮ ಮನೆ, ಶಾಲೆ, ಪರಿಸರ ಹಸಿರು, ಸ್ವಚ್ಛವಾಗಿಟ್ಟರೆ ಜಗತ್ತಿಗೇ ಮಾದರಿಯಾಗಿ ರೂಪಿಸಬಹುದು ಎಂದು ತಿಳಿಸಿದರು.
ಈ ಸಂದರ್ಭ ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಕೋಶಾಧಿಕಾರಿ ನಾಝಿಂ ರಹ್ಮಾನ್ ಮುಕಚ್ಚೇರಿ, ತೊಕ್ಕೊಟ್ಟು ರಿಚಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಿರಿಲ್ ರಾಬರ್ಟ್ ಡಿಸೋಜ, ಉಳ್ಳಾಲ ಗಸ್ತು ಅರಣ್ಯ ಪಾಲಕ ರೋಹಿತ್ ಕುಮಾರ್, ಕೋಟೆಪುರ ಜುಮಾ ಮಸೀದಿಯ ಅಧ್ಯಕ್ಷ ಫಾರೂಕ್ ಅಬ್ಬಾಸ್, ಹಿರಿಯರಾದ ಹಮ್ಮಬ್ಬ, ಇಲಾಖಾ ಅಧಿಕಾರಿ ರವೂಫ್ ಮೊದಲಾದವರು ಉಪಸ್ಥಿತರಿದ್ದರು.
ಜಂಟಿ ಶಿಕ್ಷಣ ಸಂಸ್ಥೆಯ ಮುಖ್ಯಶಿಕ್ಷಕ ಬಿ.ಎಂ.ರಫೀಕ್ ತುಂಬೆ ಸ್ವಾಗತಿಸಿದರು. ಸಹಶಿಕ್ಷಕ ಅಖಿಲ್ ಕಾರ್ಯಕ್ರಮ ನಿರೂಪಿಸಿದರು.