ಕುತ್ತಾರು, ಜೂನ್ 6: ಕುತ್ತಾರು ಭಾಗದ ಕ್ರೀಡಾಪಟುಗಳಿಗೆ ಸುಸಜ್ಜಿತ ಕ್ರೀಡಾಂಗಣದ ವ್ಯವಸ್ಥೆ ಕಲ್ಪಿಸಿ, ವಾಲಿಬಾಲ್ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ಸ್ಥಳೀಯ ಆಟಗಾರರನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸುವಂತೆ ಪ್ರೋತ್ಸಾಹಿಸುತ್ತಿರುವ ಸಂಘಟಕರ ಕಾರ್ಯ ಶ್ಲಾಘನೀಯ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಅಭಿಪ್ರಾಯಪಟ್ಟರು.
ಅವರು ಮುನ್ನೂರು ಕುತ್ತಾರಿನ ವಾಲಿಬಾಲ್ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಹಾಗೂ ಉಳ್ಳಾಲ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಆಯೋಜಿಸಲಾದ ಕೆವಿಎಫ್‌ಸಿ ಟ್ರೋಫಿ-2026 ಸೀಸನ್-3 ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಕಿಶೋರ್ ದಂಪತಿಯ ಅವಿರತ ಶ್ರಮ ಹಾಗೂ ಮುನ್ನೂರು ಗ್ರಾಮ ಪಂಚಾಯತ್‌ನ ಪ್ರೋತ್ಸಾಹದಿಂದ ವಾಲಿಬಾಲ್ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲು ಸಾಧ್ಯವಾಗಿದೆ. ಕ್ರೀಡಾಂಗಣದ ವ್ಯವಸ್ಥೆಯಿಂದ ಸ್ಥಳೀಯ ಕ್ರೀಡಾಪಟುಗಳಿಗೆ ಉತ್ತಮ ಅವಕಾಶಗಳು ದೊರೆಯುತ್ತಿದ್ದು, ನಿರಂತರ ಪ್ರೋತ್ಸಾಹದಿಂದ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದ ತಂಡಗಳನ್ನು ಪ್ರತಿನಿಧಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ಜಿ.ಪಂ. ಮಾಜಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಮಾತನಾಡಿ, ಕ್ರೀಡೆ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಸಹಕಾರಿಯಾಗಿದ್ದು, ಯುವ ಪ್ರತಿಭೆಗಳನ್ನು ಬೆಳೆಸುವ ಉದ್ದೇಶದಿಂದ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವುದು ಶ್ಲಾಘನೀಯ ಕಾರ್ಯ ಎಂದರು.
ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೆಹನಾ ಬಾನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಣಚೂರು ಆಸ್ಪತ್ರೆಯ ಡಾ. ರವಿ ವರ್ಮ, ಜಿ.ಪಂ. ಮಾಜಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಸೋಮೇಶ್ವರ ಪುರಸಭೆಯ ನಾಮನಿರ್ದೇಶಿತ ಸದಸ್ಯ ಶ್ರೀಧರ್ ಆಳ್ವ ಪಿಲಾರ್, ಶ್ರೀನಿವಾಸ್ ಹಾಗೂ ಶಾಜು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ವಾಲಿಬಾಲ್ ತಂಡಗಳಲ್ಲಿ ಪ್ರತಿನಿಧಿಸಿದ ಕ್ರೀಡಾಪಟುಗಳು ಹಾಗೂ ಕ್ರೀಡಾ ಪ್ರೋತ್ಸಾಹಕರಾದ ರೆಹಮತ್, ತ್ಯಾಗಂ ಹರೇಕಳ, ನಿಖಿಲ್ ಗಟ್ಟಿ, ಪ್ರಶಾಂತ್ ಕೈರಂಗಳ, ಡಾ. ರವಿ ವರ್ಮ ಹಾಗೂ ಖಲೀಲ್ ಕೈರಂಗಳ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕುತ್ತಾರು ಜಂಕ್ಷನ್ ಅಭಿವೃದ್ಧಿಯೊಂದಿಗೆ ಯುವಜನರ ಆರೋಗ್ಯ, ಕ್ರೀಡಾ ಪ್ರತಿಭೆ ಹಾಗೂ ಸಾಮಾಜಿಕ ಚಟುವಟಿಕೆಗಳ ಬೆಳವಣಿಗೆಗೆ ವಿಶೇಷ ಆದ್ಯತೆ ನೀಡುತ್ತಿರುವ ಕಿಶೋರ್ ಹಾಗೂ ಗಾಯತ್ರಿ ಕಿಶೋರ್ ದಂಪತಿಯ ಸೇವೆಯನ್ನು ಕಾರ್ಯಕ್ರಮದಲ್ಲಿ ಪ್ರಶಂಸಿಸಲಾಯಿತು. ಕುತ್ತಾರು ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಹಿಂಭಾಗದಲ್ಲಿ ಸರ್ಕಾರಿ ವ್ಯವಸ್ಥೆಯಡಿ ವಾಲಿಬಾಲ್ ಕೋರ್ಟ್ ನಿರ್ಮಾಣವಾಗುವಂತೆ ಮುಂದಾಳತ್ವ ವಹಿಸಿರುವ ಕಿಶೋರ್ ಅವರು ಸ್ಥಳೀಯ ಯುವಕರಿಗೆ ಉತ್ತಮ ಕ್ರೀಡಾ ವಾತಾವರಣವನ್ನು ಕಲ್ಪಿಸಿದ್ದಾರೆ.
ಈ ಕ್ರೀಡಾಂಗಣವು ಇಂದು ಕೇವಲ ಆಟದ ಮೈದಾನವಾಗಿರದೆ, ಯುವ ಪ್ರತಿಭೆಗಳ ಬೆಳವಣಿಗೆಯ ಕೇಂದ್ರವಾಗಿ ರೂಪುಗೊಂಡಿದೆ. ಪ್ರತಿದಿನ ಸಂಜೆ ವೇಳೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಯುವಕರು ಇಲ್ಲಿ ವಾಲಿಬಾಲ್ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದು, ಕ್ರೀಡಾಂಗಣದ ನಿರ್ವಹಣೆ, ಸ್ವಚ್ಛತೆ, ಬೆಳಕಿನ ವ್ಯವಸ್ಥೆ ಹಾಗೂ ಪಂದ್ಯಾವಳಿಗಳ ಆಯೋಜನೆಯಲ್ಲಿ ಕಿಶೋರ್ ದಂಪತಿಯ ಶ್ರಮ ಸ್ಪಷ್ಟವಾಗಿ ಕಾಣಿಸುತ್ತದೆ.
ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಆಯೋಜಿಸಲಾಗುತ್ತಿರುವ ವಾಲಿಬಾಲ್ ಸೀಸನ್ ಪಂದ್ಯಾವಳಿಗಳು ಸ್ಥಳೀಯ ಮಟ್ಟದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದು, ಇತ್ತೀಚೆಗೆ ನಡೆದ ಸೀಸನ್-3 ಪಂದ್ಯಾವಳಿಯಲ್ಲಿ ನೂರಾರು ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು. ಪಂದ್ಯಾವಳಿಯ ಯಶಸ್ಸಿನ ಹಿಂದೆ ಕಿಶೋರ್ ದಂಪತಿಯ ಪರಿಶ್ರಮ, ಯೋಜನಾ ಸಾಮರ್ಥ್ಯ ಹಾಗೂ ಕ್ರೀಡೆಯ ಮೇಲಿನ ಅಪಾರ ಪ್ರೀತಿಯೇ ಪ್ರಮುಖ ಕಾರಣವಾಗಿದೆ.
ಇಂದಿನ ದಿನಗಳಲ್ಲಿ ಯುವಕರು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳತ್ತ ಹೆಚ್ಚು ಆಕರ್ಷಿತರಾಗುತ್ತಿರುವ ಸಂದರ್ಭದಲ್ಲಿ, ಅವರನ್ನು ಕ್ರೀಡಾ ಚಟುವಟಿಕೆಗಳತ್ತ ಸೆಳೆಯುವಲ್ಲಿ ಕಿಶೋರ್ ದಂಪತಿಯ ಪ್ರಯತ್ನಗಳು ಮಾದರಿಯಾಗಿವೆ. ಆರೋಗ್ಯವಂತ ಸಮಾಜ ನಿರ್ಮಾಣ, ಯುವ ಪ್ರತಿಭೆಗಳ ಅನ್ವೇಷಣೆ ಹಾಗೂ ಸಾಮಾಜಿಕ ಸೌಹಾರ್ದತೆಯ ಬೆಳವಣಿಗೆಗೆ ಅವರು ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದೆ.
ಜಯಂತ್ ಕೊಂಡಾಣ ಕಾರ್ಯಕ್ರಮ ನಿರೂಪಿಸಿದರು. ಗಾಯತ್ರಿ ಕಿಶೋರ್ ಗಟ್ಟಿ ಹಾಗೂ ಶಶಿಕಲಾ ಕುತ್ತಾರು ಸನ್ಮಾನಿತರ ಪರಿಚಯ ಮಾಡಿಕೊಟ್ಟರು. ಸಂಘಟಕ ಕಿಶೋರ್ ವಂದಿಸಿದರು.
