Site icon Ullalavani

ಮತ್ತೆ ಪರೀಕ್ಷೆ ಬರೆಯಲಾಗದು: ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ನೊಂದು ನೀಟ್ ಆಕಾಂಕ್ಷಿ ಆತ್ಮಹತ್ಯೆ….!!


ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಇದರಿಂದ ಮನನೊಂದ ವಿದ್ಯಾರ್ಥಿಯೊಬ್ಬರು ಮತ್ತೆ ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯಲ್ಲಿ ನಡೆದಿದೆ.

ಮೇ 3ರಂದು ನೀಟ್ ನೀಟ್-ಯುಜಿ ಪರೀಕ್ಷೆ ನಡೆದಿದ್ದು, ಈ ಪರೀಕ್ಷೆಗೆ ಹಾಜರಾದ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಆಕಾಂಕ್ಷಾ ಚತುರ್ವೇದಿ ಕೂಡಾ ಒಬ್ಬರು. ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣ ಸಂಪೂರ್ಣ ಪರೀಕ್ಷೆಯನ್ನೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮೇ 12ರಂದು ರದ್ದುಗೊಳಿಸಿದೆ. ಜೂನ್ 21ರಂದು ಮರು ಪರೀಕ್ಷೆ ನಡೆಯಲಿದೆ.

ಈ ಬೆಳವಣಿಗೆಯಿಂದ ಮಾನಸಿಕ ಒತ್ತಡಕ್ಕೆ ಒಳಗಾದ ಆಕಾಂಕ್ಷಾ ಚತುರ್ವೇದಿ “ಮತ್ತೆ ಪರೀಕ್ಷೆ ಬರೆಯಲು ಧೈರ್ಯವಿಲ್ಲ” ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನು ಕುಟುಂಬಸ್ಥರು ಹೇಳುವ ಪ್ರಕಾರ ಆಕಾಂಕ್ಷಾ ನೀಟ್ ಪರೀಕ್ಷೆಯಲ್ಲಿ ಸುಮಾರು 650 ಅಂಕಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ ಬೆಳಕಿಗೆ ಬಂದ ಬಳಿಕ ಆಕಾಂಕ್ಷಾ ತೀವ್ರವಾಗಿ ನೊಂದಿದ್ದರು. ಆಕಾಂಕ್ಷಾಳ ಹೆತ್ತವರು ವೈದ್ಯೆಯಾಗುವ ಕನಸು ಸಾಕಾರಗೊಳಿಸಲು ಸಾಕಷ್ಟು ಸಾಲವನ್ನೂ ಮಾಡಿದ್ದರು ಎಂದು ಹೇಳಲಾಗಿದೆ.

ನಾಗ್ಪುರದಲ್ಲಿ ಈ ವಿದ್ಯಾರ್ಥಿನಿಯ ಕೋಚಿಂಗ್‌ಗಾಗಿ ಕುಟುಂಬವು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 3 ಲಕ್ಷ ರೂಪಾಯಿ ಸಾಲವನ್ನು ತೆಗೆದುಕೊಂಡಿದೆ. ವೃತ್ತಿಯಲ್ಲಿ ರೈತರಾಗಿದ್ದ ಆಕೆಯ ತಂದೆ ಕೃಷ್ಣ ಕುಮಾರ್ ಚತುರ್ವೇದಿ ಕೂಡ ನಾಗ್ಪುರದಲ್ಲಿ ಅಡುಗೆಯವರಾಗಿ ಕೆಲಸ ಮಾಡಿದ್ದರು. ಅಲ್ಲಿಯೇ ಮಗಳು ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದರು ಎಂದು ವರದಿಯಾಗಿದೆ.

ಜಾರ್ಖಂಡ್‌ನಲ್ಲಿ ಇದೇ ರೀತಿ ನಡೆದಿದೆ. ನೀಟ್ ವಿವಾದದಿಂದಾಗಿ ಖಿನ್ನತೆಗೆ ಒಳಗಾಗಿ 16 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ರಾಜಸ್ಥಾನದ ಸಿಕಾರ್‌ನಲ್ಲಿ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ 23 ವರ್ಷದ ಪ್ರದೀಪ್ ಮಹಿಚ್ (ಮೇಘವಾಲ್) ಎಂಬ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.



Exit mobile version