Site icon Ullalavani

ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ: NEET ಅಕ್ರಮಗಳಿಂದ ನೊಂದು ಸಾವನ್ನು ಅಪ್ಪಿದ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ

ನವದೆಹಲಿ: ದೇಶದ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆಯುಂಟು ಮಾಡಿದ NEET ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧ ಇಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾಕಾರರು ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಜವಾಬ್ದಾರಿತನ ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ NEET ಹಾಗೂ ಇತರೆ ಪರೀಕ್ಷಾ ಅಕ್ರಮಗಳಿಂದ ಮಾನಸಿಕವಾಗಿ ನೊಂದು, ಭವಿಷ್ಯದ ಅನಿಶ್ಚಿತತೆಯಿಂದ ಸಾವನ್ನು ಅಪ್ಪಿದ ವಿದ್ಯಾರ್ಥಿಗಳ ಆತ್ಮಗಳಿಗೆ ಮೌನ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದವರು ವಿದ್ಯಾರ್ಥಿಗಳ ಕನಸುಗಳು, ಪರಿಶ್ರಮ ಹಾಗೂ ಭವಿಷ್ಯವನ್ನು ರಕ್ಷಿಸುವುದು ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಪ್ರತಿಭಟನಾಕಾರರು NEET ಪರೀಕ್ಷಾ ಅಕ್ರಮಗಳ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಪರೀಕ್ಷಾ ಪ್ರಕ್ರಿಯೆಯಲ್ಲಿ ನಡೆದಿರುವ ಲೋಪಗಳು ಮತ್ತು ಅಕ್ರಮಗಳ ಕುರಿತು ಸಮಗ್ರ ಹಾಗೂ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕಾಕ್ರೋಚ್ ಜನತಾ ಪಾರ್ಟಿಯ ಮಾಧ್ಯಮ ವಕ್ತಾರರು ಮಾತನಾಡಿ, “ಇದು ಕೇವಲ ಒಂದು ಪರೀಕ್ಷೆಯ ವಿಷಯವಲ್ಲ. ಇದು ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ, ಅವರ ಕನಸುಗಳು ಹಾಗೂ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಯ ಪ್ರಶ್ನೆಯಾಗಿದೆ. ಪರೀಕ್ಷಾ ಅಕ್ರಮಗಳಿಂದ ನೊಂದು ಸಾವನ್ನು ಅಪ್ಪಿದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಬೇಕು. ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು” ಎಂದು ಹೇಳಿದರು.

ಅಲ್ಲದೆ ದೇಶದ ಯುವಜನತೆ ಶಾಂತಿಯುತ ಹಾಗೂ ಪ್ರಜಾಪ್ರಭುತ್ವದ ಮಾರ್ಗದಲ್ಲಿ ತಮ್ಮ ಧ್ವನಿಯನ್ನು ವ್ಯಕ್ತಪಡಿಸಬೇಕು ಎಂದು ಕರೆ ನೀಡಿದರು. ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಪರೀಕ್ಷಾ ಅಕ್ರಮಗಳ ಸಂಪೂರ್ಣ ನಿರ್ಮೂಲನೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ರಕ್ಷಣೆಗಾಗಿ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

“ವಿದ್ಯಾರ್ಥಿಗಳ ಕನಸುಗಳು ಯಾವುದೇ ಅಕ್ರಮ ಅಥವಾ ನಿರ್ಲಕ್ಷ್ಯದ ಬಲಿಯಾಗಬಾರದು. ಪರೀಕ್ಷಾ ಅಕ್ರಮಗಳಿಂದ ನೊಂದು ಸಾವನ್ನು ಅಪ್ಪಿದ ವಿದ್ಯಾರ್ಥಿಗಳ ಸ್ಮರಣಾರ್ಥವಾಗಿ ನ್ಯಾಯ, ಪಾರದರ್ಶಕತೆ ಮತ್ತು ಜವಾಬ್ದಾರಿಯುತ ಶಿಕ್ಷಣ ವ್ಯವಸ್ಥೆಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಪ್ರತಿಭಟನಾಕಾರರು ತಿಳಿಸಿದರು.

Exit mobile version