Site icon Ullalavani

ಹಲಸು-ಮಾವು ಮೇಳಕ್ಕೆ ಚಾಲನೆ: ಕೃಷಿಕರಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳು ಅಗತ್ಯ -ದೇವದಾಸ್ ಕಾಪಿಕಾಡ್

ಕೋಟೆಕಾರು, ಜೂನ್ 5: ಕೃಷಿಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿರುವುದು ಸಂತಸದ ವಿಚಾರ ಎಂದು ನಟ ಹಾಗೂ ನಿರ್ದೇಶಕ ದೇವದಾಸ್ ಕಾಪಿಕಾಡ್ ಅಭಿಪ್ರಾಯಪಟ್ಟರು.

ಅವರು ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ನೇತೃತ್ವದಲ್ಲಿ, ಸಿರಿ ತೋಟಗಾರಿಕೆ ಸಂಘ ಮಂಗಳೂರು ಹಾಗೂ ರೈತ ಕುಡ್ಲ ಪ್ರತಿಷ್ಠಾನದ ಸಹಯೋಗದೊಂದಿಗೆ ಮೂರು ದಿನಗಳ ಕಾಲ ಆಯೋಜಿಸಲಾಗಿರುವ “ಹಲಸು–ಮಾವು ಮೇಳ”ಕ್ಕೆ ಕೋಟೆಕಾರು ಬೀರಿಯ ಕೆವಿಎಸ್‌ಎಸ್ ಕನ್ವೆನ್ಶನ್ ಹಾಲ್‌ನಲ್ಲಿ ಹಲಸಿನ ಕಾಯಿ ತುಂಡರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕೃಷಿ ಕುಟುಂಬದ ಹಿನ್ನಲೆಯಿಂದ ಬಂದ ನಾನು ಮಾವು ಹಾಗೂ ಹಲಸಿನ ಕಾಯಿಯ ರುಚಿಯನ್ನು ಸವಿದು ಬೆಳೆದವನು. ಹಲಸಿನ ಕಾಯಿಯಿಂದ ಹತ್ತು ಹಲವು ರೀತಿಯ ವಿಭಿನ್ನ ತಿಂಡಿ-ತಿನಿಸುಗಳನ್ನು ತಯಾರಿಸಲಾಗುತ್ತದೆ. ಇಂತಹ ಮೇಳಗಳು ರೈತರಿಗೆ ಉಪಯುಕ್ತವಾಗುವ ಜೊತೆಗೆ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುತ್ತವೆ ಎಂದರು.

ಸಿರಿ ತೋಟಗಾರಿಕೆ ಸಂಘದ ಉಪಾಧ್ಯಕ್ಷೆ ಡಾ. ಭಾರತಿ ನಿರ್ಮಲ್ ಮಾತನಾಡಿ, ಮನೆಗಳಲ್ಲಿ ಬೆಳೆದ ತರಕಾರಿಗಳು ಹಾಗೂ ಹಣ್ಣುಗಳು ಜನರಿಗೆ ಲಭ್ಯವಾಗಬೇಕು. ಆ ಮೂಲಕ ಆರೋಗ್ಯಯುತ ಜೀವನಶೈಲಿ ಎಲ್ಲರದ್ದಾಗಬೇಕು ಎನ್ನುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಮಾತನಾಡಿ, ರೈತರು ಬೆಳೆಸುವ ಕೃಷಿ ಉತ್ಪನ್ನಗಳಿಗೆ ಬ್ಯಾಂಕ್ ವತಿಯಿಂದ ಸಬ್ಸಿಡಿ ಹಾಗೂ ವಿವಿಧ ಪ್ರೋತ್ಸಾಹಧನಗಳನ್ನು ನೀಡಲಾಗುತ್ತಿದೆ. ಕಳೆದ ವರ್ಷ ಮೇಳ ಯಶಸ್ವಿಯಾಗಿದ್ದು, ಈ ಬಾರಿಯ ಕಾರ್ಯಕ್ರಮವನ್ನೂ ಯಶಸ್ವಿಗೊಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ರೈತ ಕುಡ್ಲ ಪ್ರತಿಷ್ಠಾನದ ಅಧ್ಯಕ್ಷ ಭರತ್ ರಾಜ್ ಸೊರಕೆ ಮಾತನಾಡಿ, ಈ ಬಾರಿಯ ಮೇಳದಲ್ಲಿ ವೈವಿಧ್ಯಮಯ ಮಾವು ಹಾಗೂ ಹಲಸಿನ ತಳಿಗಳನ್ನು ಪ್ರದರ್ಶಿಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ವಿವಿಧ ತಳಿಯ ಹಣ್ಣುಗಳ ಜೊತೆಗೆ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಅವರ ತೋಟದಲ್ಲಿ ಬೆಳೆದ ಅಪರೂಪದ `ಮಿಯಾಜಾಕಿ’ ಮಾವು ಕೂಡ ಪ್ರದರ್ಶನದಲ್ಲಿದ್ದು, ಹಲವಾರು ಮಳಿಗೆಗಳು ಮೇಳದಲ್ಲಿ ಭಾಗವಹಿಸಿವೆ ಎಂದರು.

ಕಾರ್ಯಕ್ರಮದಲ್ಲಿ ನಿರ್ದೇಶಕರಾದ ರಾಘವ ಆರ್. ಉಚ್ಚಿಲ್, ರಾಘವ ಸಿ. ಉಚ್ಚಿಲ್, ಸುರೇಖಾ ಚಂದ್ರಹಾಸ್, ಗಂಗಾಧರ್ ಉಳ್ಳಾಲ್, ಬಾಬು ನಾಯ್ಕ್, ಸುನಿತಾ ಲೋಬೋ, ಕೃಷ್ಣಪ್ಪ, ಕಿರಣ್ ಕುಮಾರ್, ಅರುಣ್ ಕುಮಾರ್ ಯು., ಉದಯ್ ಕುಮಾರ್ ಶೆಟ್ಟಿ, ಕೃಷ್ಣಪ್ಪ ಸಾಲಿಯಾನ್, ಸಹಕಾರ ಸಂಘದ ಉಪಾಧ್ಯಕ್ಷ ಕೆ.ಬಿ. ಅಬುಸಾಲಿ, ಸಿಇಒ ಹರ್ಷವರ್ಧನ್ ಉಳ್ಳಾಲ್, ರೈತ ಕುಡ್ಲ ಪ್ರತಿಷ್ಠಾನದ ಕಾರ್ಯದರ್ಶಿ ಲತೀಶ್ ಮರೋಳಿ, ಸದಸ್ಯ ನವೀನ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Exit mobile version