Site icon Ullalavani

ಹೂ ಹಾಕುವ ಕಲ್ಲು ಸರಕಾರಿ ಶಾಲೆಗೆ ಅತ್ಯಾಧುನಿಕ STEM ಲ್ಯಾಬ್ ಸೌಲಭ್ಯ

ಮುಡಿಪು, ಜೂನ್ 5: ಬಾಳೆಪುಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೂ ಹಾಕುವ ಕಲ್ಲು ಪಿಎಂ ಶ್ರೀ ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಜನ ಶಿಕ್ಷಣ ಟ್ರಸ್ಟ್ ದಾನಿಗಳ ನೆರವಿನಿಂದ ₹2.40 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ STEM (Science, Technology, Engineering and Mathematics) ಪ್ರಯೋಗಾಲಯವನ್ನು ಒದಗಿಸಿದೆ.

STEM ಲ್ಯಾಬ್ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಗಣಿತ ವಿಷಯಗಳನ್ನು ಪ್ರಾಯೋಗಿಕವಾಗಿ ಕಲಿಯಲು ನೆರವಾಗುವ ಆಧುನಿಕ ಕಲಿಕಾ ವ್ಯವಸ್ಥೆಯಾಗಿದೆ. ಇಲ್ಲಿ ವಿದ್ಯಾರ್ಥಿಗಳು ಸ್ವತಃ ಉಪಕರಣಗಳನ್ನು ಬಳಸಿ ವಿವಿಧ ಪ್ರಯೋಗಗಳನ್ನು ನಡೆಸುವ ಮೂಲಕ ಸಂಕೀರ್ಣವಾದ ಗಣಿತ ಮತ್ತು ವಿಜ್ಞಾನ ತತ್ವಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹ ದೊರೆತು ವೈಜ್ಞಾನಿಕ ಮನೋಭಾವ ಹಾಗೂ ಸೃಜನಶೀಲತೆ ಬೆಳೆಯಲು ಸಹಕಾರಿಯಾಗುತ್ತದೆ.

ಎಲ್‌ಕೆಜಿ ಯಿಂದ 8ನೇ ತರಗತಿವರೆಗೆ ಒಟ್ಟು 586 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಹೊಸ STEM ಲ್ಯಾಬ್ ವಿಶೇಷವಾಗಿ 5ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದ್ದು, ಮುಂದಿನ ದಿನಗಳಲ್ಲಿ ಶಾಲೆ ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿದ ಬಳಿಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಇದರ ಸೌಲಭ್ಯ ದೊರೆಯಲಿದೆ.

ಉಳ್ಳಾಲ ತಾಲೂಕು ವ್ಯಾಪ್ತಿಯ 10 ಶಾಲೆಗಳಲ್ಲಿ ಇಂಗ್ಲಿಷ್ ಸಂವಹನ ಹಾಗೂ ಜೀವನ ಕೌಶಲ್ಯ ವಿಶೇಷ ಕಲಿಕಾ ಯೋಜನೆಯನ್ನು ಪ್ರಾಯೋಜಿಸುತ್ತಿರುವ ಎನ್.ಸಿ. ಮೂರ್ತಿ ಹಾಗೂ ಡಾ. ಜೀವನ್ ಅವರು ಗ್ರಾಮೀಣ ಪ್ರದೇಶದ ಸರಕಾರಿ ಶಾಲಾ ಮಕ್ಕಳಿಗೆ ಗುಣಮಟ್ಟದ ಹಾಗೂ ವಿಶ್ವದರ್ಜೆಯ ಶಿಕ್ಷಣ ಒದಗಿಸುವ ಉದ್ದೇಶದಿಂದ ಈ STEM ಲ್ಯಾಬ್ ಸ್ಥಾಪನೆಗೆ ನೆರವು ನೀಡಿದ್ದಾರೆ ಎಂದು ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ ತಿಳಿಸಿದ್ದಾರೆ.

ನಿಟ್ಟೆಯ ಎಕ್ಸ್‌ಪೆರಿಮೈಂಡ್ ಲ್ಯಾಬ್ಸ್ (ExperiMind Labs) ಸಂಸ್ಥೆಯ ಅಕ್ಷಯ್ ನೇತೃತ್ವದ ತಂಡ ಶಿಕ್ಷಕರಿಗೆ ಲ್ಯಾಬ್‌ನ ಸಮರ್ಪಕ ಬಳಕೆ, ನಿರ್ವಹಣೆ ಹಾಗೂ ಪ್ರಯೋಗಾಧಾರಿತ ಬೋಧನಾ ವಿಧಾನಗಳ ಕುರಿತು ಅಗತ್ಯ ತರಬೇತಿ ಮತ್ತು ಮಾರ್ಗದರ್ಶನ ನೀಡಲಿದೆ.

ಈ ಆಧುನಿಕ ಸೌಲಭ್ಯದಿಂದ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಮತ್ತಷ್ಟು ಉತ್ತೇಜನ ದೊರೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗಳತ್ತ ಆಕರ್ಷಿಸಲು ಸಹಕಾರಿಯಾಗಲಿದೆ ಎಂದು ಶಾಲಾ ಆಡಳಿತ ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.

Exit mobile version