
ಉಳ್ಳಾಲ: ತೊಕ್ಕೊಟ್ಟು ಶಕ್ತಿಭಾರತ್ ವ್ಯಾಯಾಮ ಶಾಲೆಯ ಸಕ್ರಿಯ ಸದಸ್ಯರು, ಪದಾಧಿಕಾರಿ, ರಾಷ್ಟ್ರಮಟ್ಟದ ಪವರ್ ಲಿಫ್ಟರ್ ಆಗಿರುವ ಉಳ್ಳಾಲಬೈಲ್ ನಿವಾಸಿ ಸಂತೋಷ್ ಪೂಜಾರಿ (45) ವೆಲ್ಡಿಂಗ್ ವೃತ್ತಿ ನಿರ್ವಹಿಸುತ್ತಿದ್ದ ಸಂದರ್ಭ ಕಟ್ಟಡದಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಪದವಿನಂಗಡಿ ಸಮೀಪ ಇಂದು ಸಂಜೆ ವೇಳೆ ಸಂಭವಿಸಿದೆ.
ದಿ| ಸುಂದರ್ ಪೂಜಾರಿ ಪುತ್ರನಾಗಿದ್ದ ಇವರು ಐದು ವರ್ಷಗಳ ಕಾಲ ಒಮಾನ್ ನ ಮಸ್ಕತ್ ನಲ್ಲಿ ವೆಲ್ಡಿಂಗ್ ವೃತ್ತಿಯನ್ನು ನಿರ್ವಹಿಸುತ್ತಿದ್ದರು. ಮದುವೆ ನಂತರ ಊರಿಗೆ ಬಂದವರು ವಾಪಸ್ಸು ತೆರಳಿರಲಿಲ್ಲ. ಮನೆ ಸಮೀಪವೇ ವರ್ಕ್ ಶಾಪ್ ಆರಂಭಿಸಿ ಕೆಲಸ ನಿರ್ವಹಿಸುತ್ತಿದ್ದರು. ಪದವಿನಂಗಡಿ ಸಮೀಪದ ಕಟ್ಟಡದಲ್ಲಿ ವೃತ್ತಿ ನಿರ್ವಹಿಸುತ್ತಿರುವ ಸಂದರ್ಭ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಮೃತದೇಹವನ್ನು ನಗರದ ತೇಜಸ್ವಿನಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಅನೇಕ ಸ್ಪರ್ಧಾಳುಗಳನ್ನು ತಯಾರಿಸಿದಂತಹ ತೊಕ್ಕೊಟ್ಟು ಭಟ್ನಗರದ ಶಕ್ತಿ ಭಾರತ್ ವ್ಯಾಯಾಮ ಶಾಲೆಯಲ್ಲಿ ಸಂತೋಷ್ ಅವರು ಸಕ್ರಿಯ ಸದಸ್ಯರಾಗಿದ್ದರು. ಅಲ್ಲದೇ ಶಾಲೆಯಿಂದ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟರ್ ಎಂದು ಗುರುತಿಸಿಕೊಂಡಿದ್ದರು. ಎಲ್ಲರೊಂದಿಗೂ ಅನ್ಯೋನ್ಯತೆಯಿಂದ ಇದ್ದ ಸಂತೋಷ್ ಪತ್ನಿ, ಅಪಾರ ಬಂಧು ಮಿತ್ರರು, ಕುಟುಂಬಿಕರನ್ನು ಅಗಲಿದ್ದಾರೆ.
