ಮುಡಿಪು : ಯಾವುದೇ ಧರ್ಮಕ್ಕೂ ಬೇಧಭಾವವಿಲ್ಲದೇ, ಸಿಕ್ಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಾ, ತನ್ನ ಕ್ಷೇತ್ರದ ಜನರೊಂದಿಗೇ ಸದಾ ಇದ್ದುಕೊಂಡು ಯಶಸ್ವಿ ರಾಜಕಾರಣಿಗೆ ಮತ್ತೆ ಸಚಿವ ಸ್ಥಾನ ಒಲಿದಿರುವುದು ಕ್ಷೇತ್ರದ ಜನತೆಗೆ ಹೆಮ್ಮೆಯ ವಿಚಾರ ಎಂದು ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರತಾಪ್ ಚಂದ್ರ ಕರ್ಕೇರ ಅಭಿಪ್ರಾಯಪಟ್ಟರು.
ಅವರು ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಮುಡಿಪು ಜಂಕ್ಷನ್ನಿನಲ್ಲಿ ಹಮ್ಮಿಕೊಳ್ಳಲಾದ ನೂತನ ಮುಖ್ಯಮಂತ್ರಿ ಡಿಕೆಶಿ ಹಾಗೂ ನೂತನ ಸಚಿವರಾಗಿ ಅಧಿಕಾರ ವಹಿಸಿಕೊಂಡ ಯು.ಟಿ.ಖಾದರ್ ಅವರ ಸಂಭ್ರಮವನ್ನು ಆಚರಿಸಿ ಅಂಗಡಿ ಮುಂಗಟ್ಟುಗಳಿಗೆ ಹಾಗೂ ಸಾರ್ವಜನಿಕರಿಗೆ ಸಿಹಿತಿಂಡಿ ವಿತರಿಸಿ, ಪಟಾಕಿ ಸಿಡಿಸಿ ಆಚರಿಸಿದರು.
ಕಳೆದ ಮೂರು ವರ್ಷಗಳಿಂದ ಸ್ಪೀಕರ್ ಸ್ಥಾನದಲ್ಲಿದ್ದುಕೊಂಡು ಪಕ್ಷದ ಪ್ರಾಥಮಿಕ ಸದಸ್ಯತನಕ್ಕೆ ರಾಜೀನಾಮೆ ಕೊಟ್ಟರೂ, ಕಾರ್ಯಕರ್ತರ ಕಷ್ಟ ಸುಖಗಳಿಗೆ ಸದಾ ಬೆನ್ನೆಲುಬಾಗಿ ನಿಂತವರು. ಪಕ್ಷದ ಮೇಲಿನ ಪ್ರೀತಿ ಹಾಗೂ ಗೌರವ ಅವರನ್ನು ಮತ್ತೆ ಜವಾಬ್ದಾರಿ ವಹಿಸುವಂತೆ ಮಾಡಿದೆ. ಪಕ್ಷಕ್ಕಾಗಿ ಸದಾ ತ್ಯಾಗ ಮಾಡಿದ ಕಾರ್ಯಕರ್ತರಿಗೆ ಸದಾ ಆತ್ಮಸ್ಥೈರ್ಯ ತುಂಬುವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಯಶಸ್ವಿ ಸರಕಾರ ಮುನ್ನಡೆಯಲಿದೆ ಎಂದರು.
ತಾ.ಪಂ ಮಾಜಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ಮಾತನಾಡಿ, ೨೫ನೇ ಮುಖ್ಯಮಂತ್ರಿಯಾಗಿ ಡಿಕೆಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡಿರುವುದು ಪಕ್ಷದ ನಿಷ್ಠೆಗೆ ಸಂದ ಗೌರವ. ಕ್ಷೇತ್ರದ ಶಾಸಕರು ಯು.ಟಿ.ಖಾದರ್ ಅವರ ಸಂಪುಟದಲ್ಲಿ ಇರುವುದು ಇನ್ನಷ್ಟು ಸಂತಸವನ್ನು ನೀಡಿದೆ. ಸಿದ್ಧರಾಮಯ್ಯ ಬಡವರ ಪಾಲಿನ ಯೋಜನಗೆಳನ್ನು ಜಾರಿಗೆ ತಂದವರು . ಅಪಾರ ಅಭಿಮಾನ ಅವರ ಮೇಲಿದ್ದರೂ, ವಿರೋಧ ಪಕ್ಷಗಳು ಟೀಕಿಸಿದರೂ ಪ್ರಾಮಾಣಿಕವಾಗಿ ರಾಜೀನಾಮೆ ನೀಡಿ, ನೂತನ ಸರಕಾರ ರಚಿಸವ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿ ಉತ್ತಮ ಸಹಕಾರವನ್ನು ನೀಡಿದ್ದಾರೆ ಎಂದರು.
ಕುರ್ನಾಡು ಗ್ರಾ.ಪಂ ಮಾಜಿ ಅಧ್ಯಕ್ಷ ದೇವದಾಸ್ ಭಂಡಾರಿ ಮಾತನಾಡಿ ೩ ವರ್ಷಗಳ ಕಾಲ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನುಡಿದಂತೆ ನಡೆದುಕೊಂಡಿದ್ದಾರೆ. ಅದೇ ರೀತಿಯಲ್ಲಿ ಯು.ಟಿ.ಖಾದರ್ ಅವರು ರಾಜಕೀಯ ಅಜ್ಞಾತವಾಸ ಮುಗಿಸಿ ಹೊಸತನದ ಸ್ಪರ್ಶದೊಂದಿಗೆ ಸಂಪುಟ ಸಚಿವರಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ವೇಗ ದೊರೆಯಲಿದೆ. ಕಾರ್ಯಕರ್ತರೊಂದಿಗೆ ಹೆಜ್ಜೆ ಇಡುತ್ತಾ ಎಲ್ಲರ ಸ್ಪೂರ್ತಿಯಾಗಿ ನಿಂತವರು ಖಾದರ್ ಎಂದರು.
ಈ ಸಂದರ್ಭ ಗ್ರಾ.ಪಂ ಸದಸ್ಯರುಗಳಾದ ಯಾಕೂಬ್ ಇರಾ, ಅಬ್ದುಲ್ ರಹಿಮಾನ್ ಹೂಹಾಕುವಕಲ್ಲು, ಸಿ.ಎಂ ಶರೀಫ್ ಪಟ್ಟೋರಿ, ಆಸೀಫ್ ಮೋಂಟುಗೋಳಿ, ಮೊಯ್ದೀನ್ ಕುಂಞಿ ಇರಾ, ಉಸ್ಮಾನ್ ಕುರಿಯಾಡಿ, ಬಾವು ಮೂಳೂರು, ಝಾಹಿರ್ ಸಂಪಿಲ, ಜಾಸೀಮ್ ಕುರ್ನಾಡು, ಲತೀಫ್ ಉಪಸ್ಥಿತರಿದ್ದರು.
