ಬಹರೈನ್ ರಾಷ್ಟ್ರದಲ್ಲಿರುವ ಕನ್ನಡ ಸಂಘದ ಶ್ರೀಮತಿ ಆಶಾ ಪ್ರಕಾಶ್ ಶೆಟ್ಟಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಶ್ರೀ ಸತ್ಯನಾರಾಯಣ ಪೂಜಾ ಮಹೋತ್ಸವವು ಭಕ್ತಿ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ನೆರವೇರಿತು. ಈ ಶುಭ ಸಂದರ್ಭದಲ್ಲಿ ಮಂಗಳೂರಿನ ಯುವ ಪ್ರತಿಭಾವಂತ ಕಲಾವಿದೆ ಕುಮಾರಿ ಶ್ರೀರಕ್ಷಾ ಎಸ್. ಹೆಚ್. ಪೂಜಾರಿ (ಕೊಣಾಜೆ) ಅವರು ವೀಣಾ ವಾದನ ಹಾಗೂ ಭಕ್ತಿ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟು ನೆರೆದಿದ್ದ ಭಕ್ತರು ಮತ್ತು ಪ್ರೇಕ್ಷಕರನ್ನು ಭಕ್ತಿ ಪರವಶಗೊಳಿಸಿದರು.
ತಮ್ಮ ಸುಮಧುರ ಗಾಯನ ಮತ್ತು ಮನಮೋಹಕ ವೀಣಾ ನಾದದ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದ ಶ್ರೀರಕ್ಷಾ ಅವರು, ಭಾರತೀಯ ಸಾಂಸ್ಕೃತಿಕ ಪರಂಪರೆಯ ಸೊಬಗನ್ನು ಅನಾವರಣಗೊಳಿಸಿದರು. ಅವರ ಭಾವಪೂರ್ಣ ಸಂಗೀತ ಪ್ರದರ್ಶನಕ್ಕೆ ಸಭಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಸಂಘ ಬಹರೇನ್ ಅಧ್ಯಕ್ಷ ಅಜಿತ್ ಬಂಗೇರ, ಪ್ರಧಾನ ಕಾರ್ಯದರ್ಶಿ ರಾಮ್ ಪ್ರಸಾದ್ ಆಮೆನಡ್ಕ, ಕೋಶಾಧಿಕಾರಿ ಹರಿಣಿ ಉತ್ಕರ್ಷ ಶೆಟ್ಟಿ ಹಾಗೂ ಸಂಘದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದರು.
ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ವಿದೇಶಿ ನೆಲದಲ್ಲಿ ಉಳಿಸಿ ಬೆಳೆಸುತ್ತಿರುವ ಕನ್ನಡ ಸಂಘ ಬಹರೇನ್‌ನ ಈ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.