Site icon Ullalavani

ವರ್ಗಾವಣೆಗೊಂಡ ಪೊಲೀಸ್ ಸಿಬ್ಬಂದಿಗೆ ಉಳ್ಳಾಲ ಠಾಣೆಯಲ್ಲಿ ಬೀಳ್ಕೊಡುಗೆ

ಉಳ್ಳಾಲ, ಜೂನ್ 2: ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಪೊಲೀಸ್ ಸಿಬ್ಬಂದಿಗಳಿಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭಾವಪೂರ್ಣ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡ ಸಿಬ್ಬಂದಿಗಳಾದ ವೆಂಕಟೇಶ್ (ಎಎಸ್‌ಐ), ಮನ್ಸೂರ್ (ಎಎಸ್‌ಐ), ಮಂಜುನಾಥ್ (ಹೆಡ್ ಕಾನ್ಸ್ಟೇಬಲ್), ಸುರೇಶ್ ಕುಮಾರ್ (ಹೆಡ್ ಕಾನ್ಸ್ಟೇಬಲ್), ಶಿವಪ್ರಸಾದ್ (ಹೆಡ್ ಕಾನ್ಸ್ಟೇಬಲ್), ಅಂದಾನ್ ಸ್ವಾಮಿ (ಹೆಡ್ ಕಾನ್ಸ್ಟೇಬಲ್), ಸುನಿತಾ (ಮಹಿಳಾ ಹೆಡ್ ಕಾನ್ಸ್ಟೇಬಲ್) ಹಾಗೂ ಕುಶಾಲ್ ಮಣಿಯಾಣಿ (ಎಎಸ್‌ಐ) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಪಾಂಡೇಶ್ವರದ ವೆಂಕಟೇಶ್, ಮನ್ಸೂರ್ ಹಾಗೂ ಮಂಜುನಾಥ್, ಊರ್ವ ಪೊಲೀಸ್ ಠಾಣೆಯ ಸುರೇಶ್ ಕುಮಾರ್, ಸುರತ್ಕಲ್ ಪೊಲೀಸ್ ಠಾಣೆಯ ಶಿವಪ್ರಸಾದ್, ಟ್ರಾಫಿಕ್ ಈಸ್ಟ್ ಪೊಲೀಸ್ ಠಾಣೆಯ ಅಂದಾನ್ ಸ್ವಾಮಿ, ಮಂಗಳೂರು ಉತ್ತರ ಪೊಲೀಸ್ ಠಾಣೆಯ ಸುನಿತಾ ಹಾಗೂ ಕುಶಾಲ್ ಮಣಿಯಾಣಿ ಅವರು ಇಲಾಖೆಯಿಂದ ವರ್ಗಾವಣೆಗೊಂಡಿದ್ದು, ಅವರ ಸೇವೆಯನ್ನು ಸ್ಮರಿಸಿ ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು.

ಕಾರ್ಯಕ್ರಮದಲ್ಲಿ ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ವಿಜಯ್ ಕಾಂತಿ ಹಾಗೂ ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವಿರೂಪಾಕ್ಷ ಸ್ವಾಮಿ ಅವರು ವಯೋನಿವೃತ್ತ ಸಿಬ್ಬಂದಿಗಳನ್ನು ಸನ್ಮಾನಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಪೊಲೀಸ್ ಆಯುಕ್ತ ವಿಜಯ್ ಕಾಂತಿ ಅವರು, ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ತಮ್ಮ ಸೇವಾ ಅವಧಿಯಲ್ಲಿ ಸಮಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಸಮಯವನ್ನು ವ್ಯರ್ಥ ಮಾಡದೆ ಕುಟುಂಬದೊಂದಿಗೆ ಸಮಯ ಕಳೆಯುವುದರ ಜೊತೆಗೆ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

“ಸಮಯದ ಮಹತ್ವವನ್ನು ಅರಿತು ಕರ್ತವ್ಯ ನಿರ್ವಹಿಸಿದಾಗ ಮಾತ್ರ ವ್ಯಕ್ತಿ ಮಾನಸಿಕವಾಗಿ, ದೈಹಿಕವಾಗಿ ಹಾಗೂ ಆರ್ಥಿಕವಾಗಿ ಸಮತೋಲನದ ಜೀವನ ನಡೆಸಲು ಸಾಧ್ಯವಾಗುತ್ತದೆ. ಆರೋಗ್ಯ ಮತ್ತು ಕುಟುಂಬಕ್ಕೆ ಆದ್ಯತೆ ನೀಡುವುದರಿಂದ ನಿವೃತ್ತಿ ಜೀವನವೂ ಸುಖಕರವಾಗಿರುತ್ತದೆ” ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದು, ವರ್ಗಾವಣೆಗೊಂಡ ಸಿಬ್ಬಂದಿಗಳ ಸೇವೆಯನ್ನು ಸ್ಮರಿಸಿ ಅಭಿನಂದನೆ ಸಲ್ಲಿಸಿದರು.

Exit mobile version