Site icon Ullalavani

ಬಾಕ್ರಬೈಲು: ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಿದ ಯುವಕ ವಿಷ್ಣುಗೆ ಸನ್ಮಾನ

ಬಾಕ್ರಬೈಲು, ಜೂನ್ 2: ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಕೇರಳದ 14 ಜಿಲ್ಲೆಗಳಿಗೆ ಬೈಕ್ ರೈಡ್ ಕೈಗೊಂಡಿದ್ದ ತುಳುನಾಡಿನ ಯುವಕ ವಿಷ್ಣು ಅವರು ತಮ್ಮ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಕಾಸರಗೋಡು ಜಿಲ್ಲೆ ತಲುಪಿದ ಹಿನ್ನೆಲೆಯಲ್ಲಿ ಬಾಕ್ರಬೈಲಿನಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಬಾಕ್ರಬೈಲಿನ ಕಟೀಲೇಶ್ವರೀ ಆಟೋ ವರ್ಕ್ಸ್ ಹಾಗೂ ತುಳುನಾಡ ಫ್ರೆಂಡ್ಸ್ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿಷ್ಣು ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ವೇಳೆ ಅವರ ಜಾಗೃತಿ ಅಭಿಯಾನಕ್ಕೆ ಸಹಕಾರ ನೀಡಿದ ಜೀವಿತ್ ಅವರನ್ನೂ ಗೌರವಿಸಲಾಯಿತು.

“ಸೇವ್ ನೇಚರ್, ಸೇ ನೋ ಟು ಡ್ರಗ್ಸ್” ಎಂಬ ಸಂದೇಶದೊಂದಿಗೆ ಮೇ 28ರಂದು ಮಂಗಳೂರಿನಿಂದ ಬೈಕ್ ಯಾತ್ರೆ ಆರಂಭಿಸಿದ್ದ ವಿಷ್ಣು, ಕೇರಳದ ಎಲ್ಲಾ 14 ಜಿಲ್ಲೆಗಳಲ್ಲಿ ಸಂಚರಿಸಿ ಡ್ರಗ್ಸ್‌ನ ದುಷ್ಪರಿಣಾಮಗಳ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಷ್ಣು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಸಂದರ್ಭದಲ್ಲಿ ಅನೇಕ ಯುವಕರು ಡ್ರಗ್ಸ್ ಹಾಗೂ ಗಾಂಜಾ ವ್ಯಸನಕ್ಕೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳುತ್ತಿರುವುದನ್ನು ಕಂಡಿದ್ದಾಗಿ ಹೇಳಿದರು. ಯುವಜನರನ್ನು ಈ ದುಷ್ಚಟದಿಂದ ದೂರವಿಡುವ ಉದ್ದೇಶದಿಂದ ನಾಲ್ಕು ವರ್ಷಗಳ ದುಡಿಮೆಯ ಹಣವನ್ನು ಉಳಿಸಿ ಈ ಜಾಗೃತಿ ಅಭಿಯಾನ ಆರಂಭಿಸಿದ್ದೇನೆ ಎಂದರು.

“ಯುವಜನರಲ್ಲಿ ಡ್ರಗ್ಸ್ ವ್ಯಸನ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಬೈಕ್ ರೈಡ್ ಕೈಗೊಂಡಿದ್ದೇನೆ. ಮುಂದಿನ ದಿನಗಳಲ್ಲಿ ದೇಶದಾದ್ಯಂತ ಈ ಜಾಗೃತಿ ಅಭಿಯಾನವನ್ನು ವಿಸ್ತರಿಸುವ ಯೋಜನೆ ಇದೆ,” ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುಖಿರಾಜ್ ಶೆಟ್ಟಿ ತಲಕ್ಕಿ, ಪ್ರತಿಭಾ ಫ್ಯಾಶನ್ ಮಾಲಕರಾದ ಭಾಸ್ಕರ್ ಪೂಜಾರಿ, ದಿವಾಕರ್ ದೈಲ, ಅಶ್ವಥ್ ಸಾಲೆತ್ತೂರು, ನೆಗ್‌ಲೆಟೆಟ್ ರೈಡರ್ ಜೀವಿತ್, ಕಟೀಲೇಶ್ವರೀ ಆಟೋ ವರ್ಕ್ಸ್‌ನ ಜಯಪ್ರಕಾಶ್ ತಲಕ್ಕಿ, ಚೇತನ್ ಪುಂಡುಕು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಡ್ರಗ್ಸ್ ವಿರುದ್ಧ ಯುವಕರಲ್ಲಿ ಜಾಗೃತಿ ಮೂಡಿಸುವ ವಿಷ್ಣು ಅವರ ಈ ವಿಶಿಷ್ಟ ಬೈಕ್ ಯಾತ್ರೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಅವರ ಸಮಾಜಮುಖಿ ಕಾರ್ಯಕ್ಕೆ ಇನ್ನಷ್ಟು ಬೆಂಬಲ ವ್ಯಕ್ತವಾಗುತ್ತಿದೆ.

Exit mobile version