Site icon Ullalavani

ಮೊಟ್ಟೆ ದರ ಹೆಚ್ಚಳ ಹಿನ್ನೆಲೆ: ಶಿಕ್ಷಕರ ಸಂಘದಿಂದ ಅಕ್ಷರ ದಾಸೋಹ ಇಲಾಖೆಗೆ ಮನವಿ

ಮಂಗಳೂರು, ಜೂ. 1: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದೊಂದಿಗೆ ವಿತರಿಸಲಾಗುತ್ತಿರುವ ಮೊಟ್ಟೆಯ ದರದಲ್ಲಿ ಗಣನೀಯ ಏರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ, ಸರ್ಕಾರವು ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಹೆಚ್ಚುವರಿ ಅನುದಾನ ನೀಡುವಂತೆ ಹಾಗೂ ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಕ್ಷಕರ ಸಂಘದ ಪ್ರತಿನಿಧಿಗಳು ಅಕ್ಷರ ದಾಸೋಹ ಇಲಾಖೆಗೆ ಮನವಿ ಸಲ್ಲಿಸಿದರು.

ಪ್ರತಿನಿಧಿ ತಂಡವು ಅಕ್ಷರ ದಾಸೋಹ ಇಲಾಖೆಯ ತಾಲೂಕು ಸಹ ನಿರ್ದೇಶಕಿ ಪ್ರವೀಣ ರೈ ಅವರಿಗೆ ಮನವಿ ಸಲ್ಲಿಸಿ, ಮೊಟ್ಟೆಯ ದರ ಗಗನಕ್ಕೇರಿರುವುದರಿಂದ ಪ್ರಸ್ತುತ ಸರ್ಕಾರ ನೀಡುತ್ತಿರುವ ಅನುದಾನದ ಮೊತ್ತದಲ್ಲಿ ಮೊಟ್ಟೆ ಖರೀದಿಸುವುದು ಕಷ್ಟಕರವಾಗಿದೆ ಎಂದು ತಿಳಿಸಿತು.

ಈ ಕುರಿತು ಸ್ಪಷ್ಟನೆ ನೀಡಿದ ಶಿಕ್ಷಕರ ಸಂಘದ ಮುಖಂಡರು, “ಸರ್ಕಾರವು ಈಗಿನ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಹೆಚ್ಚುವರಿ ಅನುದಾನ ನೀಡುವವರೆಗೆ ಅಥವಾ ಸರ್ಕಾರವೇ ನೇರವಾಗಿ ಶಾಲೆಗಳಿಗೆ ಮೊಟ್ಟೆಗಳನ್ನು ಪೂರೈಸುವ ವ್ಯವಸ್ಥೆ ಮಾಡುವವರೆಗೆ ಮಕ್ಕಳಿಗೆ ಮೊಟ್ಟೆಯ ಬದಲಾಗಿ ಬಾಳೆಹಣ್ಣನ್ನು ವಿತರಿಸಲಾಗುವುದು” ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಂಗಳೂರು ದಕ್ಷಿಣದ ಗೌರವಾಧ್ಯಕ್ಷ ಜಗದೀಶ್ ಶೆಟ್ಟಿ, ಅಧ್ಯಕ್ಷ ರಾಧಾಕೃಷ್ಣ ರಾವ್, ಕಾರ್ಯದರ್ಶಿ ಮೋಹನ್ ಶಿರ್ಲಾಲ್, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಕೆ. ಮಂಜನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಂಗಳೂರು ಉತ್ತರದ ಅಧ್ಯಕ್ಷ ಜಯರಾಮ್, ಕಾರ್ಯದರ್ಶಿ ರೀಟಾ ಡೇಸ್, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಅಂಬರೀಶ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ತ್ಯಾಗಂ ಹರೆಕಳ ಹಾಗೂ ಮೂಡಬಿದಿರೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version