ಉಳ್ಳಾಲ: ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸೈಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸೈಯದ್ ಮದನಿ ಪ್ರೌಢಶಾಲೆಗಳ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವನ್ನು ಟ್ರಸ್ಟ್ ಅಧ್ಯಕ್ಷ ಜನಾಬ್ ಅಶ್ರಫ್ ಅಹ್ಮದ್ ರೈಟ್ ವೇ ಅವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
“ಉತ್ತಮ ಕಲಿಕೆ – ಉಜ್ವಲ ಭವಿಷ್ಯ” ಎಂಬ ಘೋಷವಾಕ್ಯದೊಂದಿಗೆ ಪ್ರಸಕ್ತ ಶೈಕ್ಷಣಿಕ ವರ್ಷದ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಈಶ್ವರ ಅವರು, ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಲೆಯೊಂದಿಗೆ ನಿಕಟ ಬಾಂಧವ್ಯ ಬೆಳೆಸಿಕೊಂಡು ಶಿಕ್ಷಣದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್‌ನ ಐದು ಪ್ರೌಢಶಾಲೆಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿರುವುದನ್ನು ಶ್ಲಾಘಿಸಿ ಅಭಿನಂದಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶ್ರೀಮತಿ ಫಾತಿಮಾ ಅವರು ದಾಖಲಾತಿ ಕಾರ್ಯಕ್ಕೆ ಚಾಲನೆ ನೀಡಿದರು. 2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಲು ಶ್ರಮಿಸಿದ ಶಿಕ್ಷಕಿಯರಾದ ಸಪ್ನಾ, ರಮ್ಲಾ ಬಾನು, ಶಕೀಲಾ, ಸುಮನ ಹಾಗೂ ಸೌಮ್ಯ ಅವರನ್ನು ಮತ್ತು ಸಹಕರಿಸಿದ ಪ್ರಾಥಮಿಕ ಶಾಲಾ ಶಿಕ್ಷಕಿಯರಾದ ಹಸೀನ್ ತಾಜ್, ಬಬಿತಾ ಸೆಲಿನ್ ಡಿಸೋಜಾ, ವೀಣಾ, ಶಶಿಕಲಾ, ವಿದ್ಯಾಶ್ರೀ ರಾವ್, ಅಸ್ಮಾ, ಅರ್ಪಿತಾ ರೈ, ಸುಮನ ಹಾಗೂ ದಾಮಿನಿ ಅವರನ್ನು ಶೈನಿಂಗ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಹಳೆಕೋಟೆ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಮಂಗಳೂರು ದಕ್ಷಿಣ ವಲಯಕ್ಕೆ ಉತ್ತಮ ಫಲಿತಾಂಶ ತರಲು ಮಾರ್ಗದರ್ಶನ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಈಶ್ವರ ಅವರನ್ನು ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗೌರವಿಸಲಾಯಿತು. ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಅಧಿಕಾರಿಗಳು, ಟ್ರಸ್ಟ್ ಪದಾಧಿಕಾರಿಗಳು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಶಿಕ್ಷಕರು ಗುಲಾಬಿ ಹೂ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.
ಶಾಲೆಯ ಮುಖ್ಯೋಪಾಧ್ಯಾಯ ಕೆ.ಎಂ.ಕೆ. ಮಂಜನಾಡಿ ಅವರನ್ನು ಉತ್ತಮ ನಾಯಕತ್ವಕ್ಕಾಗಿ ಸನ್ಮಾನಿಸಲಾಯಿತು. ಹಳೆಕೋಟೆ ಜುಮಾ ಮಸೀದಿಯ ಖತೀಬ್ ಜನಾಬ್ ಸಿರಾಜುದ್ದೀನ್ ಸಖಾಫಿ ಅವರ ನೇತೃತ್ವದಲ್ಲಿ ಬದ್ರ್ ಮೌಲೂದ್ ಪಾರಾಯಣ ನಡೆಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಸ್ಜಿದ್ ಅಲ್ ಕರೀಮ್ ಅಧ್ಯಕ್ಷ ಹಾಜಿ ಮೊಹಮ್ಮದ್ ತ್ವಾಹ, ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಜನಾಬ್ ಇಮ್ತಿಯಾಜ್ ಹುಸೇನ್, ಕೋಶಾಧಿಕಾರಿ ಜನಾಬ್ ಅಬೂಬಕ್ಕರ್, ಶಾಲಾಭಿವೃದ್ಧಿ ಸಮಿತಿಯ ಹಿರಿಯ ಸದಸ್ಯರಾದ ಹಾಜಿ ಜೈನುದ್ದೀನ್, ಜನಾಬ್ ಅಲ್ತಾಫ್ ಹಳೆಕೋಟೆ, ಕರೀಂ ಹಳೆಕೋಟೆ, ಎಂ.ಎಚ್. ಇಬ್ರಾಹಿಂ, ಕ್ಷೇತ್ರ ಸಮನ್ವಯ ಅಧಿಕಾರಿ ಸುಷ್ಮಾ, ಬ್ಲಾಕ್ ಸಂಪನ್ಮೂಲ ವ್ಯಕ್ತಿ ತಹಸೀನ್ ಬೇಗಂ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮೋಹನ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ಕೆ.ಎಂ.ಕೆ. ಮಂಜನಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಮಾಧ್ಯಮ ಶಾಲೆಗೆ ನಿರಂತರ ಸಹಕಾರ ನೀಡುತ್ತಿರುವ ಶಾಲಾ ಅಭಿವೃದ್ಧಿ ಹಾಗೂ ಆಡಳಿತ ಸಮಿತಿಗೆ ಕೃತಜ್ಞತೆ ಸಲ್ಲಿಸಿದರು. ಮುಖ್ಯೋಪಾಧ್ಯಾಯರು ಸ್ವಾಗತಿಸಿದರು. ಶಿಕ್ಷಕಿ ಸಪ್ನಾ ವಂದಿಸಿದರು. ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು. ಉಳ್ಳಾಲ ನಗರ ಪಂಚಾಯತ್ ಮಾಜಿ ಸದಸ್ಯೆ ಝರೀನಾ ಅವರು ವಿದ್ಯಾರ್ಥಿಗಳಿಗೆ ಗುಲಾಬಿ ಹೂಗಳನ್ನು ವಿತರಿಸಿದರು.