Site icon Ullalavani

ಕರಾವಳಿ ಮೇಲಿರುವ ಭಯವನ್ನು ಹೋಗಲಾಡಿಸಬೇಕು :ಮೈಸೂರು ಬಾವಾ

ಉಳ್ಳಾಲ: ಕರಾವಳಿಯ ಮೇಲಿರುವ ಭಯವನ್ನು ಹೋಗಲಾಡಿಸಿ ಮತ್ತೆ ೩೦ ವರ್ಷಗಳ ಹಿಂದಿನ ಸೌಹಾರ್ದಯುತ ವಾತಾವರಣವನ್ನು ನಿರ್ಮಿಸಬೇಕಿದೆ. ಈ ನಿಟ್ಟಿನಲ್ಲಿ ಸಾಯಿ ಫ್ರೆಂಡ್ಸ್‌ ಅಸೈಗೋಳಿ ಹಮ್ಮಿಕೊಳ್ಳುತ್ತಿರುವ ಸೌಹಾರ್ದ ಕಾರ್ಯಕ್ರಮಗಳು ಶಾಂತಿಯುತ ಸಮಾಜಕ್ಕೆ ಪೂರಕವಾದುದು   ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್‌ ಅಝೀಝ್‌ ಯಾನೆ  ಮೈಸೂರ್‌ ಬಾವಾ ಅಭಿಪ್ರಾಯಪಟ್ಟರು. 

ಅವರು ಮಂಜನಾಡಿ ತಮ್ಮ ನಿವಾಸದಲ್ಲಿ ಸಾಯಿ ಫ್ರೆಂಡ್ಸ್‌ ಸರ್ಕಲ್‌ ಅಸೈಗೋಳಿ  ಭಾನುವಾರ ಹಮ್ಮಿಕೊಂಡ ಪ್ರತಿಭಾನ್ವಿತ ವಿದ್ಯಾರ್ಥಿಗೆ ಸನ್ಮಾನ ಹಾಗೂ ಅರ್ಹ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಿ ಮಾತನಾಡಿದರು.

ಸಾಯಿ ಫ್ರೆಂಡ್ಸ್‌ ಇವರ ಚಟುವಟಿಕೆಗಳನ್ನು ಗಮನಿಸುವಾಗ  ಕರಾವಳಿಯ ೩೦ ವರ್ಷಗಳ ಹಿಂದಿನ ಪ್ರೀತಿ ಮತ್ತೆ ಮರುಕಳಿಸುತ್ತಿದೆ ಅನ್ನುವ ಅಭಿಪ್ರಾಯಗಳು ಮೂಡುತ್ತಿದೆ.  ಹಿಂದೆ ಉರೂಸ್‌ ಸಂದರ್ಭದಲ್ಲಿಯೂ  ಇದೇ ಸಂಘದ ವತಿಯಿಂದ ಹೊರೆಕಾಣಿಕೆಯನ್ನು ದರ್ಗಾಕ್ಕೆ ಸಲ್ಲಿಸಲಾಗಿತ್ತು. ಇದು ಜಿಲ್ಲೆಯಲ್ಲಿ ಅಷ್ಟು ಮಟ್ಟಿನ ಸುದ್ಧಿಯಾಗದೇ ಇದ್ದರೂ ಮೈಸೂರು, ಬೆಂಗಳೂರಿನಾದ್ಯಂತ  ಜಿಲ್ಲೆಯ ಸೌಹಾರ್ದ ವಾತಾವರಣವು ಬಹಳಷ್ಟು ದನಿ ಮಾಡಿತ್ತು.  ಮಂಗಳೂರು ಅಂದಲ್ಲಿ ಭಯದ ವಾತಾವರಣವಿದೆ, ಅದನ್ನು ಹೋಗಲಾಡಿಸಿ ಮತ್ತೆ ಶಾಂತಿ ನೆಲೆಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕಿದೆ.  ಮಂಜನಾಡಿ ಉರೂಸ್‌ ಸಂದರ್ಭದಲ್ಲಿ  ಮಾದಕ ವ್ಯಸನದ ಕುರಿತು ನೀಡಿರುವ ಸಂದೇಶ ಎಲ್ಲಾ ಬಾಂಧವರಲ್ಲಿಯೂ ಜಾಗೃತಿಯನ್ನು ಮೂಡಿಸಿದೆ ಎಂದರು. 

ಕೊಣಾಜೆ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಶೌಕತ್‌ ಆಲಿ ಮಾತನಾಡಿ,ಕಳೆದ ನಾಲ್ಕು ವರ್ಷಗಳಿಂದ ಸಾಯಿ ಫ್ರೆಂಡ್ಸ್‌ ಅಸೈಗೋಳಿ  ವತಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಸುತ್ತಾ ಬರಲಾಗಿದೆ. ಅಬ್ದುಲ್‌ ಅಝೀಝ್‌ ಯಾನೆ ಮೈಸೂರು ಬಾವಾ ಅವರ ಸಹಕಾರದೊಂದಿಗೆ ಎಲ್ಲಾ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನೆರವೇರಿಸಲಾಗಿದೆ ಎಂದರು. 

ಖಾಸಗಿ ಬಸ್ಸು ಮಾಲೀಕರ ಸಂಘದ ಅಧ್ಯಕ್ಷ  ಅಝೀಝ್‌ ಪರ್ತಿಪ್ಪಾಡಿ, ಉದ್ಯಮಿ ಸಿ.ಎಂ ಫಾರುಕ್‌, ನಾಟೆಕಲ್‌ ವರ್ತಕರ ಸಂಘದ ಅಧ್ಯಕ್ಷ ಹನೀಫ್‌,  ಕಾಸಿಂ,  ಸಾಯಿ ಫ್ರೆಂಡ್ಸ್‌ ಅಸೈಗೋಳಿ ಇದರ ಅಧ್ಯಕ್ಷ ಅಶ್ರಫ್‌ ನಾಟೆಕಲ್‌,  ಗೌರವಾಧ್ಯಕ್ಷ ಸುನಿಲ್‌ ಪೂಜಾರಿ, ಕಾರ್ಯದರ್ಶಿ ಪ್ರದೀಪ್‌, ಹರೀಶ್‌ ಪೂಜಾರಿ, ಶ್ರೀಕಾಂತ್‌, ಸುನಿಲ್‌ ಕೋಟೆ,  ರವಿಶಂಕರ್‌, ದೀಪಕ್‌,  ಪ್ರೇಮದಾಸ್‌, ಪ್ರವೀಣ್‌  ಮುಂತಾದವರು ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಪಿಯುಸಿಯಲ್ಲಿ ಶೇ.91 ಪಡೆದ ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಕಾಲೇಜಿನ ವಿದ್ಯಾರ್ಥಿ  ಪ್ರಜ್ವಲ್‌ ಕುಮಾರ್‌ ನನ್ನು ಅಭಿನಂದಿಸಲಾಯಿತು. 

ಕಳೆದ ೪ ವರ್ಷಗಳಿಂದ ಸಾಯಿ ಫ್ರೆಂಡ್ಸ್‌ ಅಸೈಗೋಳಿ  ಮಂಜನಾಡಿ, ಉರುಮಣೆ, ನಾಟೆಕಲ್‌, ತಿಬ್ಲೆಪದವು , ಅಸೈಗೋಳಿ ಭಾಗದ ಅರ್ಹ ಬಡ ವಿದ್ಯಾರ್ಥಿಗಳಿಗೆ ಸಹಾಯಹಸ್ತವನ್ನು ನೀಡುತ್ತಾ ಬಂದಿದೆ.  ೮೫ ಕ್ಕೂ ಅಧಿಕ ಮಕ್ಕಳು ಫಲಾನುಭವಿಗಳಾಗಿದ್ದಾರೆ.

Exit mobile version