Site icon Ullalavani

ಮಂಗಳೂರು ನಗರದಲ್ಲಿ ಯೂಟ್ಯೂಬರ್ ಗಳ ಹಾವಳಿ, ಸುದ್ದಿಯ ರಭಸದಲ್ಲಿ ವಿಡಿಯೊದಲ್ಲಿ ಹೇಳಿಕೆ ವಿವಾದ : ಬಿಎನ್‌ಎಸ್ ಸೆಕ್ಷನ್ 196 ಮತ್ತು 353 ಅಡಿಯಲ್ಲಿ ಪ್ರಕರಣ ದಾಖಲು

ಮಂಗಳೂರು: ಸಾಮಾಜಿಕ ಜಾಲತಾಣ ಹಾಗೂ ಯೂಟ್ಯೂಬ್‌ ವೇದಿಕೆಗಳಲ್ಲಿ ಪ್ರಸಾರವಾದ ವಿಡಿಯೊದಲ್ಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 196 ಮತ್ತು 353ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಪೊಲೀಸರ ಪ್ರಕಾರ, ವಿಡಿಯೊದಲ್ಲಿನ ಕೆಲವು ಹೇಳಿಕೆಗಳು ಧರ್ಮ, ಪ್ರದೇಶ, ಭಾಷೆ ಅಥವಾ ಇತರೆ ಗುರುತುಗಳ ಆಧಾರದ ಮೇಲೆ ದ್ವೇಷ, ವೈಮನಸ್ಸು ಅಥವಾ ಅಸಾಮರಸ್ಯವನ್ನು ಉತ್ತೇಜಿಸುವ ಸಾಧ್ಯತೆಯನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.

ಈ ಸಂಬಂಧ ದೂರು ಇಂದು ಸ್ವೀಕರಿಸಲಾಗಿದ್ದು, ಘಟನೆ ನಡೆದ ದಿನ ಸ್ಥಳದಿಂದ ತೆರಳಿದ್ದ ವ್ಯಕ್ತಿಯೊಬ್ಬರು ಬಳಿಕ ಹಿಂದಿರುಗಿ ಅಧಿಕೃತ ದೂರು ಸಲ್ಲಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತರು , ಪತ್ರಕರ್ತರು ಮತ್ತು ವರದಿಗಾರರ ಜವಾಬ್ದಾರಿ ಘಟನೆಗಳು ಹಾಗೂ ಸತ್ಯಾಂಶಗಳನ್ನು ನಿಷ್ಪಕ್ಷಪಾತವಾಗಿ ವರದಿ ಮಾಡುವುದಾಗಿದೆ. ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ವೈಮನಸ್ಸು ಸೃಷ್ಟಿಸುವುದು, ಸಮಾಜದಲ್ಲಿ ವಿಭಜನೆ ಉಂಟುಮಾಡುವುದು ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವುದು ಯಾವುದೇ ಮಾಧ್ಯಮ ಕಾರ್ಯಕರ್ತರ ಕರ್ತವ್ಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೆಲವರು ಯೂಟ್ಯೂಬ್ ಅಥವಾ ಸಾಮಾಜಿಕ ಜಾಲತಾಣ ವೇದಿಕೆಗಳ ಮೂಲಕ ವಿಷಯಗಳನ್ನು ಪ್ರಸಾರ ಮಾಡುವ ವೇಳೆ ವೃತ್ತಿಪರ ಪತ್ರಿಕೋದ್ಯಮದ ಮಾನದಂಡಗಳನ್ನು ಪಾಲಿಸದಿರುವ ಕುರಿತು ಈ ಹಿಂದೆಯೂ ದೂರುಗಳು ಕೇಳಿಬಂದಿವೆ. ಆದರೆ ಈ ಕುರಿತು ನಡೆಯುತ್ತಿರುವ ತನಿಖೆಯ ಬಳಿಕವೇ ವಾಸ್ತವಾಂಶಗಳು ಸ್ಪಷ್ಟವಾಗಲಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಲಭ್ಯವಿರುವ ಸತ್ಯಾಂಶಗಳು, ಸಾಕ್ಷ್ಯಾಧಾರಗಳು ಹಾಗೂ ದೂರಿನ ಆಧಾರದ ಮೇಲೆ ಬಿಎನ್‌ಎಸ್‌ನ ಸೆಕ್ಷನ್ 196 ಮತ್ತು 353ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಕುರಿತು ಪ್ರತಿಯೊಬ್ಬ ನಾಗರಿಕನಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ಆದರೆ ಅಂತಹ ಅಭಿವ್ಯಕ್ತಿ ಕಾನೂನಿನ ಚೌಕಟ್ಟಿನೊಳಗೆ ಇರಬೇಕು ಹಾಗೂ ಸಾರ್ವಜನಿಕ ಸುವ್ಯವಸ್ಥೆ ಮತ್ತು ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ಉಂಟುಮಾಡಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅದೇ ದಿನ ಮಹಿಳೆಯೊಬ್ಬರು ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಯ ವಿರುದ್ಧವೂ ದೂರು ನೀಡಿದ್ದರು.ಪೊಲೀಸರು ವಿಡಿಯೊವನ್ನು ಪರಿಶೀಲಿಸಿದ ಬಳಿಕ ಯಾವುದೇ ಅಪರಾಧ ಪ್ರಕರಣ ದಾಖಲಾಗುವಂತಹ ಅಂಶಗಳು ಕಂಡುಬರದ ಕಾರಣ ಪ್ರಕರಣ ದಾಖಲಿಸದೆ ನಾನ್-ಕಾಗ್ನಿಜಬಲ್ (NC) ದಾಖಲಾತಿ ಮಾಡಲಾಗಿತ್ತು ಹಾಗೂ ದೂರಿನ ಸ್ವೀಕೃತಿ ಪತ್ರ (Acknowledgement) ನೀಡಲಾಗಿತ್ತು. ಬಳಿಕ ಮಹಿಳೆ ಕಾನೂನು ಪ್ರಕ್ರಿಯೆಯಂತೆ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯದ ನಿರ್ದೇಶನದ ಮೇರೆಗೆ ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version