ಬೆಂಗಳೂರು,ಮೇ. 28 : ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ತೀವ್ರ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸುವ ಮೂಲಕ ಅಧಿಕಾರದಿಂದ ಕೆಳಗೆ ಇಳಿದಿದ್ದಾರೆ.
ರಾಜೀನಾಮೆ ಸಲ್ಲಿಕೆಗೂ ಮುನ್ನ ಇಂದು ಬೆಳಿಗ್ಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸಚಿವರ ಕೊನೆಯ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ನಡೆಯಿತು.
ಉಪಹಾರ ಸಭೆಯಲ್ಲಿ ಭಾಗಿಯಾಗಿದ್ದ ಪ್ರಮುಖ ಮಂತ್ರಿಗಳು ಮತ್ತು ಆಪ್ತ ನಾಯಕರು ಸಿದ್ದರಾಮಯ್ಯ ಅವರ ಸುದೀರ್ಘ ಹೋರಾಟದ ಪಯಣವನ್ನು ನೆನೆದು ಭಾವುಕರಾದರು. ಹಲವು ಸಚಿವರ ಕಣ್ಣೀರು ಹಾಕಿದರು. ಸಹೋದ್ಯೋಗಿ ಮಂತ್ರಿಗಳಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ ಮಧ್ಯಾಹ್ನ ಭೋಜನ ಬಳಿಕ ರಾಜೀನಾಮೆ ಪತ್ರ ಹಿಡಿದು ಕಾರಿನಲ್ಲಿ ರಾಜಭವನ ತೆರಳಿದರು.ರಾಜ್ಯಪಾಲರು ಪ್ರಸ್ತುತ ರಾಜಧಾನಿಯಲ್ಲಿ ಇಲ್ಲದ ಕಾರಣ, ಅವರ ಅನುಪಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಹಸ್ತಾಂತರಿಸಿದರು. ಸದ್ಯ ರಾಜೀನಾಮೆ ಪತ್ರವನ್ನು ಕಾರ್ಯದರ್ಶಿಗಳು ಸ್ವೀಕರಿಸಿದ್ದರೂ, ಸಂವಿಧಾನದ ನಿಯಮಾವಳಿಗಳ ಪ್ರಕಾರ ರಾಜ್ಯಪಾಲರು ಖುದ್ದಾಗಿ ಸಹಿ ಮಾಡಿದ ಬಳಿಕವೇ ರಾಜೀನಾಮೆ ಅಧಿಕೃತವಾಗಿ ಅಂಗೀಕಾರವಾಗಲಿದೆ.