ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಉಳ್ಳಾಲ ಕಡೆಗೆ ವಿಹಾರಕ್ಕೆ ತೆರಳಿದ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳ ಬೆನ್ನಟ್ಟಿದ ಮೊಗವೀರಪಟ್ನ ನಿವಾಸಿ ಐವರು ನೈತಿಕ ಪೊಲೀಸರ ತಂಡ ಕೊಣಾಜೆಯ ವಿ.ವಿ ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿಯೋರ್ವನಿಗೆ ಥಳಿಸುವ ಸಂದರ್ಭ ಕೊಣಾಜೆ ಪೊಲೀಸರು ಬಂಧಿಸಿದ ಘಟನೆ ನಿನ್ನೆ ಸಂಜೆ ವೇಳೆ ಸಂಭವಿಸಿದೆ.
ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ವಿಭಾಗವೊಂದರ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಬಳ್ಳಾರಿ ಮೂಲದ ರಮೇಶ, ಪುತ್ತೂರು ನಿವಾಸಿ ಶಫೀವುಲ್ಲಾ ಸೇರಿದಂತೆ ಇಬ್ಬರು ಹಿಂದು ಹಾಗೂ ಒಬ್ಬಳು ಮುಸ್ಲಿಂ ವಿದ್ಯಾರ್ಥಿನಿಯರು ಜತೆಯಾಗಿ ಉಳ್ಳಾಲ ಕಡೆಗೆ ವಿಹಾರಕ್ಕೆಂದು ತೆರಳಿದ್ದರು. ಸೋಮೇಶ್ವರ ದೇವಸ್ಥಾನ, ಉಳ್ಳಾಲ ದರ್ಗಾ ಮತ್ತು ಮೊಗವೀರಪಟ್ನ ಬೀಚಿಗೆ ವಿದ್ಯಾರ್ಥಿಗಳು ವಿಹಾರಕ್ಕೆ ತೆರಳಿದ್ದರು. ಅಲ್ಲಿ ಎಲ್ಲರೂ ಜತೆಯಾಗಿ ನೀರಿನಾಟ ಆಡುತ್ತಾ ಸೆಲ್ಫೀ ಕ್ಲಿಕ್ಕಿಸುವಲ್ಲಿ ನಿರತರಾಗಿದ್ದರು. ಇದು ಸ್ಥಳೀಯ ಯುವಕರ ಗಮನಕ್ಕೆ ಬಂದಿದ್ದು, ಅಲ್ಲದೆ ತಂಡದಲ್ಲಿ ಮುಸ್ಲಿಂ ಯುವಕರು ಇರುವ ಬಗ್ಗೆ ಗೊತ್ತಾಗಿದೆ. ಮತ್ತೆ ವಿದ್ಯಾರ್ಥಿಗಳನ್ನು ಫಾಲೋ ಮಾಡಲು ತಂಡ ಶುರುಹಚ್ಚಿತ್ತು. ಇದರಿಂದ ಗಾಬರಿಗೊಂಡಿದ್ದ ವಿದ್ಯಾರ್ಥಿಗಳು ಬಸ್ಸನ್ನೇರಿ ವಿಶ್ವವಿದ್ಯಾನಿಲಯದತ್ತ ಪ್ರಯಾಣ ಬೆಳೆಸಿದ್ದರು. ಆದರೆ ಪಟ್ಟುಬಿಡದ ಮೊಗವೀರಪಟ್ನದ ನಿವಾಸಿಗಳ ತಂಡ ರಿಕ್ಷಾ ಏರಿ ಬಸ್ಸನ್ನು ಹಿಂಬಾಲಿಸಲು ಆರಂಭಿಸಿ ತೊಕ್ಕೊಟ್ಟು ಸಮೀಪ ಅಡ್ಡಗಟ್ಟಿದ್ದರು. ಅಲ್ಲಿ ವಿದ್ಯಾರ್ಥಿಗಳಲ್ಲಿ ಶಫೀವುಲ್ಲಾ ಎಂಬಾತ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಬಳಿಕ ವಿದ್ಯಾರ್ಥಿ ರಮೇಶ್‍ನನ್ನು ರಿಕ್ಷಾ ದಲ್ಲಿ ಹಾಕಿದ ತಂಡ ಶಫೀವುಲ್ಲಾ ಇರುವ ರೂಮಿನ ಮತ್ತು ಕ್ಲಾಸನ್ನು ತೋರಿಸುವಂತೆ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಕರೆತಂದಿದ್ದಾರೆ. ಅಲ್ಲಿ ಕ್ಯಾಂಪಸ್ಸಿನಲ್ಲಿ ರಮೇಶನಿಗೆ ಥಳಿಸುತ್ತಿರುವುದನ್ನು ಗಮನಿಸಿದ ಇತರೆ ವಿದ್ಯಾರ್ಥಿಗಳು ಕೊಣಾಜೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೊಗವೀರಪಟ್ನ ನಿವಾಸಿಗಳಾದ ಸುಹಾನ್, ಸುನಿಲ್, ಪ್ರಜ್ವಲ್, ಅಭಿಲಾಷ್, ಚಂದ್ರ ಎಂಬವರನ್ನು ಬಂಧಿಸಿದ್ದಾರೆ. ಎಲ್ಲರ ವಿರುದ್ಧ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.