Site icon Ullalavani

ದೇರಳಕಟ್ಟೆ ಆಸ್ಪತ್ರೆ ಜಂಕ್ಷನ್‌ನಲ್ಲಿ ಕೊಳಚೆ ನೀರು ಶೇಖರಣೆ; ದುರ್ವಾಸನೆ, ರೋಗಭೀತಿ ಹೆಚ್ಚಳ – ಕಠಿಣ ಕ್ರಮಕ್ಕೆ ಸಿಪಿಐಎಂ ಒತ್ತಾಯ

ಉಳ್ಳಾಲ: ಉಳ್ಳಾಲ ತಾಲೂಕಿನ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆ ಜಂಕ್ಷನ್‌ನಲ್ಲಿ ಕಳೆದ ಹಲವು ತಿಂಗಳಿಂದ ಕೊಳಚೆ ನೀರು ಶೇಖರಣೆಯಾಗಿರುವ ಪರಿಣಾಮ ಪರಿಸರದಲ್ಲಿ ತೀವ್ರ ದುರ್ವಾಸನೆ ಹರಡುತ್ತಿದ್ದು, ಸಾರ್ವಜನಿಕರು ಹಾಗೂ ವಾಹನ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಉಳ್ಳಾಲ ವಲಯ ಸಮಿತಿಯು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಈ ಕುರಿತು ಉಳ್ಳಾಲ ತಾಲೂಕು ತಹಶೀಲ್ದಾರ್, ಕೋಟೆಕಾರ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು, ಬೆಳ್ಮ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಗಳಿಗೆ ಸಿಪಿಐ(ಎಂ) ನಿಯೋಗವು ಮನವಿ ಅರ್ಪಿಸಿತು.

ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮುಂಭಾಗದ ರಸ್ತೆ ಬೆಳ್ಮ ಗ್ರಾಮ ಪಂಚಾಯತ್ ಹಾಗೂ ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಧ್ಯದಲ್ಲಿ ಹಾದು ಹೋಗುತ್ತದೆ. ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಲಾಡ್ಜ್‌ಗಳು ಹಾಗೂ ವಾಣಿಜ್ಯ ಸಂಕೀರ್ಣಗಳಿಂದ ಹೊರಬರುವ ಡ್ರೈನೇಜ್ ನೀರು ಪ್ರಮುಖ ರಸ್ತೆಯ ಅಡಿಭಾಗದಲ್ಲಿ ಹರಿದು ಆಸ್ಪತ್ರೆ ಸಮೀಪದ ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಸೇರುತ್ತಿದೆ. ಆದರೆ ಆಸ್ಪತ್ರೆಯ ಮುಖ್ಯದ್ವಾರದ ಬಳಿಯೇ ಕೊಳಚೆ ನೀರಿನ ಹರಿವು ತಡೆಹಿಡಿಯಲ್ಪಟ್ಟ ಪರಿಣಾಮ ನೀರು ಶೇಖರಣೆಯಾಗಿ ದುರ್ವಾಸನೆ ವ್ಯಾಪಿಸಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಈ ಪರಿಸ್ಥಿತಿಯಿಂದ ಮಲೇರಿಯಾ, ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿದ್ದು, ಪಕ್ಕದಲ್ಲಿರುವ ಆಟೋರಿಕ್ಷಾ ನಿಲ್ದಾಣದ ಚಾಲಕರು ದುಡಿಯಲು ಅಸಾಧ್ಯವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಆಟೋರಿಕ್ಷಾ ಚಾಲಕರು ಪ್ರತಿದಿನ ಈ ದುರ್ವಾಸನೆಯ ನಡುವೆ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.

ಕಳೆದ ಹಲವು ತಿಂಗಳಿಂದ ಸಮಸ್ಯೆ ಮುಂದುವರಿದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಸಿಪಿಐ(ಎಂ), ಜನರ ಆರೋಗ್ಯದ ಹಿತದೃಷ್ಟಿಯಿಂದ ತಕ್ಷಣ ಮಧ್ಯಪ್ರವೇಶಿಸಿ ಶಾಶ್ವತ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಮನವಿ ಸಲ್ಲಿಸಿದ ನಿಯೋಗದಲ್ಲಿ ಸಿಪಿಐ(ಎಂ) ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಹಿರಿಯ ಕಮ್ಯುನಿಸ್ಟ್ ನಾಯಕ ಕೃಷ್ಣಪ್ಪ ಸಾಲ್ಯಾನ್, ಜನಾರ್ಧನ ಕುತ್ತಾರ್, ಇಬ್ರಾಹಿಂ ಅಂಬ್ಲಮೊಗರು, ಸದಾಶಿವ ಕುತ್ತಾರ್, ಡಿವೈಎಫ್‌ಐ ಜಿಲ್ಲಾ ನಾಯಕ ರಜಾಕ್ ಮುಡಿಪು ಹಾಗೂ ಸಿಐಟಿಯು ನಾಯಕ ಜಗದೀಶ್ ಭಾಗವಹಿಸಿದ್ದರು.

Exit mobile version