Site icon Ullalavani

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

ದಕ್ಷಿಣ ಕನ್ನಡ ಜಿಲ್ಲೆಯ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಮನೋವೈದ್ಯರು (Psychiatrists) ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ (Clinical Psychologists) ತೀವ್ರ ಕೊರತೆ ಉಂಟಾಗಿರುವುದರಿಂದ ಬಡ ಹಾಗೂ ಗ್ರಾಮೀಣ ಭಾಗದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಜಿಲ್ಲೆಯ ದೂರದ ಊರುಗಳಿಂದ ಬರುವ ಜನರು, ವಿಶೇಷವಾಗಿ ಡಿಸೆಬಲ್ ಮಕ್ಕಳ ಪೋಷಕರು, ಶಾಲೆಗಳಿಗೆ ಅಗತ್ಯವಿರುವ ವೈದ್ಯಕೀಯ ಪ್ರಮಾಣಪತ್ರ ಪಡೆಯಲು ದಿನಗಟ್ಟಲೆ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ವಾರಕ್ಕೆ ಕೇವಲ ಎರಡು ದಿನ ಮಾತ್ರ ಸಂಬಂಧಿತ ವೈದ್ಯರ ಲಭ್ಯತೆ ಇರುವುದರಿಂದ ಅನೇಕ ಮಕ್ಕಳು ಹಾಗೂ ಪೋಷಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನೋವೈದ್ಯಕೀಯ ಹಾಗೂ ಮಾನಸಿಕ ಆರೋಗ್ಯ ಸೇವೆಗಳು ಇಂದಿನ ಪರಿಸ್ಥಿತಿಯಲ್ಲಿ ಅತ್ಯಂತ ಅಗತ್ಯವಾಗಿದ್ದರೂ, ಜಿಲ್ಲೆಯಲ್ಲಿ ಪ್ರಮುಖ ಸರ್ಕಾರಿ ಆಸ್ಪತ್ರೆಯಲ್ಲೇ ವೈದ್ಯರ ಕೊರತೆ ಇರುವುದು ಆರೋಗ್ಯ ಇಲಾಖೆಯ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಈ ಗಂಭೀರ ಸಮಸ್ಯೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಸಚಿವರು ಯಾಕೆ ಗಮನ ಹರಿಸುತ್ತಿಲ್ಲ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ. ಸರ್ಕಾರದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವ ಅಧಿಕಾರ ಇದ್ದರೂ, ಬಡವರ ಆಸ್ಪತ್ರೆಯಾದ ವೆನ್ಲಾಕ್ ಆಸ್ಪತ್ರೆಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಯಾಕೆ ಎಂಬುದರ ಬಗ್ಗೆ ಸಾರ್ವಜನಿಕರು ಸ್ಪಷ್ಟ ಉತ್ತರ ಕೇಳುತ್ತಿದ್ದಾರೆ.

ತಕ್ಷಣವೇ ಅಗತ್ಯ ಸಂಖ್ಯೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳನ್ನು ನೇಮಕ ಮಾಡಿ, ಪ್ರತಿದಿನ ಸೇವೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

Exit mobile version