ದಕ್ಷಿಣ ಕನ್ನಡ ಜಿಲ್ಲೆಯ ಜೋಕಟ್ಟೆ ಪ್ರದೇಶದಲ್ಲಿ ಕೈಗಾರಿಕಾ ಮಾಲಿನ್ಯ ವಿರುದ್ಧ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಸ್ಥಳೀಯ ಸಂತ್ರಸ್ತರ ಧರಣಿಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಭೇಟಿ ನೀಡಿ ಮನವಿ ಸ್ವೀಕರಿಸಿದರು.
MRPL ಕೈಗಾರಿಕಾ ಮಾಲಿನ್ಯದಿಂದ ಸಂಕಷ್ಟ ಅನುಭವಿಸುತ್ತಿರುವ ಜನರು ಕಳೆದ 12 ವರ್ಷಗಳಿಂದ ನರಕ ಸದೃಶ ಜೀವನ ನಡೆಸುತ್ತಿದ್ದಾರೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು. ವಿಶೇಷವಾಗಿ ಹೊಗೆ ಮಾಲಿನ್ಯವು ಮಕ್ಕಳ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಉಸಿರಾಟ ಸಮಸ್ಯೆ, ಅಲರ್ಜಿ ಹಾಗೂ ಇತರೆ ಆರೋಗ್ಯ ತೊಂದರೆಗಳು ಹೆಚ್ಚುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
“ಜನರ ಉಸಿರು ಹಸಿರಿನಲ್ಲಿ ಇದೆ” ಎಂಬ ಸಂದೇಶದೊಂದಿಗೆ ಹೋರಾಟಗಾರರು ಹೋರಾಟ ನಡೆಸುತ್ತಿದ್ದರು. ಹಸಿರು ವಲಯ ನಿರ್ಮಾಣಕ್ಕೆ ಆಗಲೇ ನೀಡಲಾಗಿದ್ದ ಆದೇಶವನ್ನು ತಕ್ಷಣ ಜಾರಿಗೊಳಿಸುವಂತೆ ಆಗ್ರಹಿಸಿದರು.
ಹಸಿರು ವಲಯ ನಿರ್ಮಾಣದ ಆದೇಶಕ್ಕೆ ಹತ್ತು ವರ್ಷಕ್ಕೂ ಹೆಚ್ಚು ಕಾಲ ಕಳೆದಿದ್ದರೂ MRPL ಸಂಸ್ಥೆ ಅದನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯಗತಗೊಳಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಧರಣಿ ಸ್ಥಳಕ್ಕೆ ಆಗಮಿಸಿದ ಸಚಿವ ದಿನೇಶ್ ಗುಂಡೂರಾವ್ ಅವರು ಸಂತ್ರಸ್ತರ ಮನವಿ ಆಲಿಸಿ, ಸಮಸ್ಯೆಗೆ ನ್ಯಾಯ ಒದಗಿಸುವ ಭರವಸೆ ನೀಡಿದರು. ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಅಂದು ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ.
ಆದರೆ ಸ್ಥಳೀಯರು ಮತ್ತು ಹೋರಾಟಗಾರರ ಪ್ರಶ್ನೆ ಒಂದೇ — ಈ ಭರವಸೆ ಕೇವಲ ಬಾಯಿಯಲ್ಲೇ ಉಳಿಯುತ್ತದೆಯೇ? ಅಥವಾ ನಿಜವಾದ ಕಾರ್ಯರೂಪ ಪಡೆದು ಜನರಿಗೆ ಶಾಶ್ವತ ಪರಿಹಾರ ಒದಗಿಸುತ್ತದೆಯೇ? ಎಂಬುದನ್ನು ಕಾದು ನೋಡಬೇಕಾಗಿದೆ.