ಉಳ್ಳಾಲ: ಖಾಸಗಿ ಬಸ್ ನೌಕರರು ಮತ್ತು ಮಾಲಕರು ಎರಡೂ ವರ್ಗಗಳು ಈಗಾಗಲೇ ಹಲವು ಒತ್ತಡಗಳ ನಡುವೆ ಕೆಲಸ ನಿರ್ವಹಿಸುತ್ತಿದ್ದಾರೆ. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವತ್ತ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘ, ಮಂಗಳೂರು ಇದರ ಅಧ್ಯಕ್ಷ ಉಸ್ಮಾನ್ ಅಲ್ತಾಫ್ ಒತ್ತಾಯಿಸಿದ್ದಾರೆ.
ಡೀಸೆಲ್ ದರ ಈಗಾಗಲೇ ₹4 ರಷ್ಟು ಏರಿಕೆಯಾಗಿದೆ. ಒಂದು ಕಡೆ ಇಂಧನ ವೆಚ್ಚ, ವಾಹನಗಳ ಬಿಡಿಭಾಗಗಳ ವೆಚ್ಚ, ನಿರ್ವಹಣಾ ವೆಚ್ಚ ಹಾಗೂ ಇತರ ಖರ್ಚುಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಖಾಸಗಿ ಬಸ್ ಕ್ಷೇತ್ರವು ಹಲವಾರು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ. ಆದರೂ ದಕ್ಷಿಣ ಕನ್ನಡ ಖಾಸಗಿ ಬಸ್ ಮಾಲಕರ ಸಂಘದ ಸಭೆಯಲ್ಲಿ ಸದ್ಯಕ್ಕೆ ಬಸ್ ಪ್ರಯಾಣ ದರ ಹೆಚ್ಚಿಸುವ ಯಾವುದೇ ನಿರ್ಧಾರ ಇಲ್ಲ ಎಂದು ತಿಳಿಸಲಾಗಿದೆ. ಸಾರ್ವಜನಿಕರ ಮೇಲಿನ ಹೊರೆ ಹೆಚ್ಚಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಸರ್ಕಾರವು ಖಾಸಗಿ ಸಾರಿಗೆ ಕ್ಷೇತ್ರವನ್ನು ಕೇವಲ ಸೇವಾ ಕ್ಷೇತ್ರವಾಗಿ ಮಾತ್ರ ನೋಡದೆ, ಸಾವಿರಾರು ಕುಟುಂಬಗಳ ಜೀವನಾಧಾರವಾಗಿರುವ ಉದ್ಯಮವಾಗಿ ಪರಿಗಣಿಸಬೇಕು. ಇಂಧನ ದರ ಏರಿಕೆ, ಹೆಚ್ಚುತ್ತಿರುವ ನಿರ್ವಹಣಾ ವೆಚ್ಚ ಹಾಗೂ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸರ್ಕಾರ ಗಂಭೀರ ಗಮನ ಹರಿಸಬೇಕಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.