Site icon Ullalavani

ಅಸೈಗೋಳಿ: “ಸಾಧನಾ -2026” ವಾರ್ಷಿಕೋತ್ಸವ

ಕೊಣಾಜೆ: ಯಾವುದೇ ಕಲೆಯು ಸಿದ್ಧಿಯಾಗಬೇಕಾದರೆ ಪರಿಶ್ರಮದೊಂದಿಗೆ ಕಲಾಸಕ್ತಿಯೂ ಮುಖ್ಯ. ಭರತನಾಟ್ಯ ಕಲೆ ಶ್ರೇಷ್ಠ ಕಲೆಯಾಗಿದ್ದು ಇದರ ಶಾಸ್ತ್ರೀಯತೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಬ್ಧಾರಿ ನಮ್ಮೆಲ್ಲರಿಗೂ ಇದೆ ಎಂದು ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ, ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಅವರು ಹೇಳಿದರು.


ಅವರು ಅಸೈಗೋಳಿಯಲ್ಲಿ ಗುರುವಾರದಂದು ನಡೆದ ಅಸೈಗೋಳಿಯ ಶ್ರೀ ದುರ್ಗಾ ಸ್ವಾತಿ ನೃತ್ಯಾಲಯದ ‘ಸಾಧನಾ -2026’ 12 ನೇ ವರ್ಷದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.


ಸಮಾರಂಭದ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ‌ ಸತೀಶ್ ಕುಂಪಲ ಅವರು ವಹಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯು ಅತ್ಯಂತ ಶ್ರೀಮಂತವಾದ ಸಂಸ್ಕೃತಿಯಾಗಿದೆ. ಭರತನಾಟ್ಯ, ಯಕ್ಷಗಾನದಂತಹ ಕಲೆಗಳು ನಮ್ಮ ನಾಡಿನ ಶ್ರೇಷ್ಠತೆಗೆ ಕಾರಣೀಭೂತವಾಗಿದೆ. ದುರ್ಗಾಸ್ವಾತಿ ನೃತ್ಯಾಲಯವು ಯಶಸ್ವಿಯಾಗಿ ಮುನ್ನಡೆಯಲಿ ಎಂದರು.
ಕಾರ್ಯಕ್ರಮದಲ್ಲಿ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್, ವಿದುಷಿ ರಾಜಶ್ರೀ ಉಳ್ಳಾಲ
ವಿದ್ವಾನ್ ಪ್ರಮೋದ್ ಉಳ್ಳಾಲ್ ಅವರಿಗೆ ಗೌರವಾಭಿವಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಪುಣ್ಯಕೋಟಿ ಶ್ರೀ ಶಾರದಾ ಗಣಪತಿ ವಿದ್ಯಾ ಸಂಸ್ಥೆಯ ಸಂಚಾಲಕರಾದ ಟಿ.ಜಿ.ರಾಜಾರಾಂ ಭಟ್, ಬಂಟರ ಸಂಘದ ಅಧ್ಯಕ್ಷರಾದ ರವೀಂದ್ರ ರೈ ಕಲ್ಲಿಮಾರ್, ಮುಡಿಪು ಕುಲಾಲ ಸಂಘದ ಅಧ್ಯಕ್ಷರಾದ ಪುಂಡರೀಕ್ಷಾ ಕುಲಾಲ್, ಪ್ರವೀಣ್ ಕುಂಪಲ, ಯುವ ಉದ್ಯಮಿ ಕಿರಣ್ ಕುಮಾರ್ , ಉದ್ಯಮಿ ಚಂದ್ರಶೇಖರ್ ಮಂಟಮೆ ಮೊದಲಾದವರು ಉಪಸ್ಥಿತರಿದ್ದರು.
ನೃತ್ಯಗುರು ವಿದುಷಿ ಸ್ವಾತಿ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಸ್ತಿಕಾ ಸ್ವಾಗತಿಸಿದರು. ದಿನೇಶ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಪ್ರಭು ವಂದಿಸಿದರು.
ಬಳಿಕ ವಿದ್ಯಾರ್ಥಿಗಳಿಂದ ಭರತನಾಟ್ಯ ಹಾಗೂ ನೃತ್ಯರೂಪಕ ನಡೆಯಿತು.

Exit mobile version