ಬೋಳಿಯಾರ್: ಬೋಳಿಯಾರ್‌ನ ಅಮರ್‌ದೀಪ್ ಕಾಂಪ್ಲೆಕ್ಸ್‌ನ ವರ್ಕಸ್ ಹಾಗೂ ಕೆನರಾ ಬ್ಯಾಂಕ್ ಶಾಖೆಯ ಸಿಬ್ಬಂದಿ ವರ್ಗದವರ ವತಿಯಿಂದ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದ ಮುರಳಿ ಅವರಿಗೆ ಇತ್ತೀಚೆಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಕಳೆದ ಮೂರು ವರ್ಷಗಳಿಂದ ಬೋಳಿಯಾರ್ ಕೆನರಾ ಬ್ಯಾಂಕ್ ಶಾಖೆಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದ ಮುರಳಿ ಅವರು ತಮ್ಮ ದಕ್ಷತೆ, ಸೌಜನ್ಯ ಹಾಗೂ ಜನಸ್ನೇಹಿ ಕಾರ್ಯವೈಖರಿಯಿಂದ ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಅವರು ಬೆಂಗಳೂರು ಶಾಖೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಈ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮುರಳಿ ಅವರಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಫಲಪುಷ್ಪ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಈ ವೇಳೆ ಉಪಸ್ಥಿತರಿದ್ದ ವರ್ಕಸ್ ಹಾಗೂ ಬ್ಯಾಂಕ್ ಸಿಬ್ಬಂದಿ ಮಿತ್ರರು ಅವರ ಮುಂದಿನ ವೃತ್ತಿಜೀವನ ಮತ್ತಷ್ಟು ಉನ್ನತ ಮಟ್ಟಕ್ಕೆ ಏರಲಿ ಎಂದು ಶುಭ ಹಾರೈಸಿದರು.
ಅಮರ್‌ದೀಪ್ ಕಾಂಪ್ಲೆಕ್ಸ್‌ನ ವರ್ಕಸ್‌ರು, ಬ್ಯಾಂಕ್ ಸಿಬ್ಬಂದಿ ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.