ಮಂಗಳೂರು, ಮೇ. 18 : ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ವತಿಯಿಂದ ಆಯೋಜಿಸಲಾಗುತ್ತಿರುವ ಏಳನೇ ಆವೃತ್ತಿಯ “ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ 2026” ಸ್ಪರ್ಧೆಗಳು ಮೇ 29ರಿಂದ 31ರವರೆಗೆ ಮಂಗಳೂರಿನ ತಣ್ಣೀರುಭಾವಿಯ ಬ್ಲೂ ಬೇ ಎಕೋ ಬೀಚ್‌ನಲ್ಲಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕರ್ನಾಟಕವು ಸರ್ಫಿಂಗ್ ಹಾಗೂ ಕರಾವಳಿ ಕ್ರೀಡೆಗಳ ಕ್ಷೇತ್ರದಲ್ಲಿ ದೇಶದ ಪ್ರಮುಖ ತಾಣವಾಗಿ ನಿರಂತರವಾಗಿ ಹೊರಹೊಮ್ಮುತ್ತಿದೆ. ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಸ್ಪರ್ಧೆ ಕ್ರೀಡೆ ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ,” ಎಂದು ಹೇಳಿದರು.“ನಮ್ಮ ಕರಾವಳಿಯ ಸೌಂದರ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವುದರ ಜೊತೆಗೆ, ಯುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಇಂತಹ ಪ್ರತಿಷ್ಠಿತ ಸ್ಪರ್ಧೆಗೆ ಜಿಲ್ಲಾಡಳಿತದಿಂದ ಸಂಪೂರ್ಣ ಬೆಂಬಲ ನೀಡುತ್ತಿರುವುದು ಸಂತಸದ ಸಂಗತಿ,” ಎಂದು ಅವರು ತಿಳಿಸಿದರು.ಐಚಿ-ನಗೋಯಾ ಏಷ್ಯನ್ ಗೇಮ್ಸ್ ಗುರಿಯಾಗಿಸಿಕೊಂಡಿರುವ ದೇಶದ ವಿವಿಧ ಭಾಗಗಳ ಸರ್ಫಿಂಗ್ ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. “ಈ ಸರ್ಫಿಂಗ್ ಸ್ಪರ್ಧೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾದರೆ ಸ್ಥಳೀಯ ಪ್ರತಿಭೆಗಳಿಗೆ ಉತ್ತೇಜನ ನೀಡುವುದು. ಸಸಿಹಿತ್ಲು ಸೇರಿದಂತೆ ಕರಾವಳಿ ಭಾಗಗಳಲ್ಲಿ ಈಗಾಗಲೇ ಅನೇಕ ಸ್ಥಳೀಯ ಯುವಕರು ಸರ್ಫಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಮೀನುಗಾರ ಸಮುದಾಯದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷ,” ಎಂದು ತಿಳಿಸಿದರು.“ಕಳೆದ ಏಳು ವರ್ಷಗಳಲ್ಲಿ ಮಂಗಳೂರಿನಲ್ಲಿ ನಡೆದ ಈ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ ಅನೇಕ ರಾಷ್ಟ್ರೀಯ ಮಟ್ಟದ ಸರ್ಫರ್‌ಗಳು ಬಳಿಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಆ ಸಾಧಕರ ವಿವರಗಳನ್ನು ಸಂಗ್ರಹಿಸಿ ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಳ್ಳುವ ಯೋಜನೆಯೂ ಇದೆ,” ಎಂದು ಹೇಳಿದರು.“ಕರಾವಳಿ ಕ್ರೀಡೆಗಳಿಗೆ ಉತ್ತೇಜನ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ಕರ್ನಾಟಕದಲ್ಲಿ ಕರಾವಳಿ ಪ್ರದೇಶ ಹೊಂದಿರುವ ಮೂರು ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡ ಮುಂಚೂಣಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಮೂರು ದಿನಗಳ ಕಾಲ ನಡೆಯುವ ಈ ವಿಶಿಷ್ಟ ಕ್ರೀಡೆಯನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕು,” ಎಂದು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ನರ್ವಡೆ ವಿನಾಯಕ ಕಾರ್ಭಾರಿ , ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರಾದ ಮೀನಾಕ್ಷಿ ಆರ್ಯ ,ಸರ್ಫಿಂಗ್ ಸ್ವಾಮಿ ಫೌಂಡೇಶನ್ ಇದರ ಅಧ್ಯಕ್ಷರಾದ ಧನಂಜಯ್ ಶೆಟ್ಟಿ , ಸರ್ಫಿಂಗ್ ತಂಡದ ಸದಸ್ಯರಾದ ಶ್ಯಾಮ್ , ದ್ರುವಾ , ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳಾದ ಪ್ರದೀಪ್ ಡಿಸೋಜಾ ಸಹಿತ ಮತ್ತಿತರರು ಉಪಸ್ಥಿತರಿದ್ದರು .