Site icon Ullalavani

ಸ್ವೀಡನ್​​​​​ನಲ್ಲಿ ಮೋದಿಗೆ ‘ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್, ಕಮಾಂಡರ್ ಗ್ರಾಂಡ್ ಕ್ರಾಸ್’ ಪ್ರಶಸ್ತಿ

ನವದೆಹಲಿ; ಪ್ರಧಾನಿ ನರೇಂದ್ರ ಮೋದಿ  ಅವರು ಆರು ದಿನಗಳ ಐದು ರಾಷ್ಟ್ರಗಳ ಪ್ರವಾಸದಲ್ಲಿದ್ದು, ಯುಎಇ ಸೇರಿದಂತೆ ಐದು ದೇಶಗಳ ರಾಜತಾಂತ್ರಿಕ ಪ್ರವಾಸ ಕೈಗೊಂಡಿದ್ದಾರೆ. ಪಶ್ಚಿಮ ಏಷ್ಯಾದ ಯುದ್ಧದ ಭೀತಿಯ ನಡುವೆ ಇಂಧನ ಭದ್ರತೆ  ಹಾಗೂ ಯುರೋಪ್ ರಾಷ್ಟ್ರಗಳೊಂದಿಗೆ ರಕ್ಷಣೆ ಮತ್ತು ವ್ಯಾಪಾರ ಒಪ್ಪಂದಗಳನ್ನು ಬಲಪಡಿಸುವುದು ಈ ಭೇಟಿಯ ಮುಖ್ಯ ಗುರಿಯಾಗಿದೆ. ಯುಎಇ ಹಾಗೂ ನೆದರ್ಲ್ಯಾಂಡ್ ಭೇಟಿ ಬಳಿಕ ಸ್ವೀಡನ್ ಗೆ  ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವೀಡನ್‌ನ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಮೋದಿಗೆ ಸ್ವೀಡನ್‌ನ ಅತ್ಯುನ್ನತ ನಾಗರಿಕ ಗೌರವವಾದ ‘ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್, ಕಮಾಂಡರ್ ಗ್ರಾಂಡ್ ಕ್ರಾಸ್’ ಪ್ರಶಸ್ತಿ ನೀಡಿ ಗೌರವಿಸಲಾಯ್ತು.



ಮೋದಿ ಅವರಿಗೆ ದೊರೆತ 31ನೇ ಜಾಗತಿಕ ಗೌರವ

ಎರಡು ದಿನಗಳ ಭೇಟಿಗಾಗಿ ಭಾನುವಾರ ಸ್ವೀಡನ್‌ಗೆ ಆಗಮಿಸಿದ ಮೋದಿ ಅವರನ್ನ ಸ್ವೀಡನ್‌ನ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಅವರು ಗೋಥೆನ್‌ಬರ್ಗ್ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡಿದ್ದು, ಬಳಿಕ ಉಭಯ ನಾಯಕರು ವ್ಯಾಪಾರ, ತಂತ್ರಜ್ಞಾನ, ರಕ್ಷಣೆ ಮತ್ತು ಇತರ ಪ್ರಮುಖ ಕ್ಷೇತ್ರಗಳ ಕುರಿತು ಚರ್ಚೆ ನಡೆಸಿದರು. ಇದೇ ವೇಳೆ ಮೋದಿಗೆ ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್ ಕಮಾಂಡರ್ ಗ್ರ್ಯಾಂಡ್ ಕ್ರಾಸ್ ಪ್ರಶಸ್ತಿಯ ಪ್ರದಾನ ಮಾಡಲಾಯ್ತು. ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್, ಕಮಾಂಡರ್ ಗ್ರ್ಯಾಂಡ್ ಕ್ರಾಸ್ ಎಂಬುದು ಸರ್ಕಾರದ ಮುಖ್ಯಸ್ಥರಿಗೆ ನೀಡುವ ಅತ್ಯುನ್ನತ ಮನ್ನಣೆ ಮತ್ತು ಗೌರವವಾಗಿದೆ. ಇನ್ನು ಇದು ಪ್ರಧಾನಿ ಮೋದಿ ಅವರಿಗೆ ದೊರೆತ 31ನೇ ಜಾಗತಿಕ ಗೌರವ ಇದಾಗಿದೆ.

ಭಾರತದ ಆರ್ಥಿಕ ಅಭಿವೃದ್ಧಿ, ಸ್ವಾವಲಂಬನೆ ಮತ್ತು ಜಾಗತಿಕ ಪೂರೈಕೆ  ಬಲಪಡಿಸಲು ಮೋದಿಯವರ ಈ ಭೇಟಿ ಮೈಲಿಗಲ್ಲಾಗಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಕಳೆದ 2025 ರಲ್ಲಿ ಎರಡು ದೇಶಗಳ ನಡುವಿನ ವ್ಯಾಪಾರ 7.75 ಬಿಲಿಯನ್ ಡಾಲರ್ ತಲುಪಿತ್ತು. ಈಗ ಭಾರತದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 280ಕ್ಕೂ ಹೆಚ್ಚು ಸ್ವೀಡಿಷ್ ಕಂಪನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.


ಸ್ವೀಡನ್‌ನ ರಕ್ಷಣಾ ದೈತ್ಯ ಕಂಪನಿ ‘ಸಾಬ್’ (Saab), ಹರಿಯಾಣದ ಝಜ್ಜರ್‌ನಲ್ಲಿ ಕಾರ್ಲ್-ಗಸ್ಟಾಫ್ ಯುದ್ಧೋಪಕರಣ ಉತ್ಪಾದನಾ ಘಟಕವನ್ನು ನಿರ್ಮಿಸುತ್ತಿದೆ. ಇದು ಶೇ. 100 ರಷ್ಟು ನೇರ ವಿದೇಶಿ ಹೂಡಿಕೆ (FDI) ಹೊಂದಿರುವ ಭಾರತದ ಮೊದಲ ರಕ್ಷಣಾ ಉತ್ಪಾದನಾ ಯೋಜನೆಯಾಗಿದೆ. ಇದು ‘ಮೇಕ್ ಇನ್ ಇಂಡಿಯಾ’ ಮತ್ತು ತಂತ್ರಜ್ಞಾನ ವರ್ಗಾವಣೆಯನ್ನು (Technology Transfer) ಜಗತ್ತಿನಲ್ಲೇ ಅತ್ಯಂತ ಬಲಿಷ್ಠಗೊಳಿಸಲಿದೆ. ಇನ್ನು ತನ್ನ ಜಿಡಿಪಿಯ ಶೇ. 3ಕ್ಕಿಂತ ಹೆಚ್ಚು ಹಣವನ್ನು ರಿಸರ್ಚ್‌ಗೆ ಖರ್ಚು ಮಾಡುವ ಸ್ವೀಡನ್, ಈಗ ಭಾರತದೊಂದಿಗೆ ಕೃತಕ ಬುದ್ಧಿಮತ್ತೆ (AI), ಕ್ವಾಂಟಮ್, ಸೆಮಿಕಂಡಕ್ಟರ್ ಮತ್ತು 6G ಕ್ಷೇತ್ರಗಳಲ್ಲಿ ಕೈಜೋಡಿಸುತ್ತಿದೆ.

2025ರಲ್ಲಿ 7.75 ಶತಕೋಟಿ ಅಮೆರಿಕನ್ ಡಾಲರ್‌ ತಲುಪಿದ್ದ ದ್ವಿಪಕ್ಷೀಯ ವ್ಯಾಪಾರವನ್ನು ಮತ್ತಷ್ಟು ಹೆಚ್ಚಿಸಲು ಹೊಸ ಸಹಕಾರ ಮಾರ್ಗಗಳ ಬಗ್ಗೆ ಮಾತುಕತೆಗಳಾಗಿದ್ದವು. ಕೃತಕ ಬುದ್ಧಿಮತ್ತೆ (AI), ಉದಯೋನ್ಮುಖ ತಂತ್ರಜ್ಞಾನಗಳು, ನವೋದ್ಯಮಗಳು (ಸ್ಟಾರ್ಟ್‌ಅಪ್‌ಗಳು), ರಕ್ಷಣೆ, ಬಾಹ್ಯಾಕಾಶ, ಹವಾಮಾನ ವೈಪರೀತ್ಯ ನಿಯಂತ್ರಣ ಮತ್ತು ಜನರ ನಡುವಿನ ಬಾಂಧವ್ಯವನ್ನು ವೃದ್ಧಿಸುವ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಉಭಯ ನಾಯಕರು ಒತ್ತು ನೀಡಿದ್ದಾರೆ.

Exit mobile version