Site icon Ullalavani

ಬಡವರ ಬದುಕಿನ ಹಕ್ಕು ಮತ್ತು ಆರೋಗ್ಯ. ಸಾರ್ವಜನಿಕ ಆರೋಗ್ಯ ರಕ್ಷಣೆಗಾಗಿ ಧ್ವನಿ ಎತ್ತಿದ ಮುನೀರ್ ಕಾಟಿಪಳ್ಳ

ರಾಜ್ಯ ಸರಕಾರವು ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸುವ ನಿರ್ಧಾರ ಕೈಗೊಂಡಿರುವುದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಭವಿಷ್ಯದ ಕುರಿತಾಗಿ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಆರೋಗ್ಯ ಎಂಬುದು ಕೇವಲ ಸೇವೆ ಅಲ್ಲ, ಅದು ಭಾರತದ ಸಂವಿಧಾನ ನೀಡಿರುವ ಬದುಕುವ ಹಕ್ಕಿನ ಒಂದು ಅಂಶ. ಇಂದಿನ ಕಾಲದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ಚಿಕಿತ್ಸಾ ವೆಚ್ಚ ಸಾಮಾನ್ಯ ಜನರನ್ನು ಆರ್ಥಿಕವಾಗಿ ಕುಗ್ಗಿಸುತ್ತಿರುವ ಸಂದರ್ಭದಲ್ಲಿ, ಸರಕಾರಿ ಆಸ್ಪತ್ರೆಗಳ ಮಹತ್ವ ಇನ್ನಷ್ಟು ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ “ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಮಾರಾಟ ಮಾಡಲು ಬಿಡುವುದಿಲ್ಲ” ಎಂಬ ಧ್ವನಿ ಜನಸಾಮಾನ್ಯರ ಕಳವಳದ ಪ್ರತಿಧ್ವನಿಯಾಗಿದೆ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣಗೊಂಡ ಆಸ್ಪತ್ರೆಗಳು ಬಡವರು, ಮಧ್ಯಮ ವರ್ಗದವರು ಮತ್ತು ಗ್ರಾಮೀಣ ಜನರಿಗೆ ಜೀವನಾಡಿಯಾಗಿವೆ. ಅವುಗಳನ್ನು ಹಂತ ಹಂತವಾಗಿ ಖಾಸಗೀಕರಣಗೊಳಿಸುವುದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲ ಆತ್ಮವನ್ನೇ ದುರ್ಬಲಗೊಳಿಸುವ ಅಪಾಯವನ್ನು ಹೊಂದಿದೆ.

ಈ ನಿರ್ಧಾರದ ಕುರಿತು ವೈದ್ಯರುಗಳು ಹಾಗೂ ವೈದ್ಯರ ಸಂಘಟನೆಗಳ ಮೌನವು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಸಮಾಜದ ಆರೋಗ್ಯದ ರಕ್ಷಕರಾಗಿರುವ ವೈದ್ಯರುಗಳು, ವಿಶೇಷವಾಗಿ ಜನಪರ ನಿಲುವಿನವರಾಗಿ ಗುರುತಿಸಿಕೊಂಡವರು, ಈ ವಿಷಯದಲ್ಲಿ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬೇಕಾಗಿತ್ತು. ಬೇರೆ ಅನೇಕ ಸಾಮಾಜಿಕ ಮತ್ತು ಆಡಳಿತಾತ್ಮಕ ವಿಚಾರಗಳ ಕುರಿತು ಪ್ರತಿಕ್ರಿಯಿಸುವ ವೈದ್ಯರ ಸಂಘಟನೆಗಳು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಈ ದೊಡ್ಡ ಬದಲಾವಣೆಯ ವಿಚಾರದಲ್ಲಿ ಮೌನವಾಗಿರುವುದು ಜನರಲ್ಲಿ ಅನುಮಾನ ಹುಟ್ಟಿಸಿದೆ.

ಪ್ರತಿ ಮನೆ ಮನೆಯಲ್ಲೂ ಸಾರ್ವಜನಿಕ ಆರೋಗ್ಯ ಇಲಾಖೆಯ “ಮಾರಾಟ” ಕುರಿತು ಚರ್ಚೆ ನಡೆಯಬೇಕಾಗಿದೆ. ಏಕೆಂದರೆ ಇದು ಕೇವಲ ಆಸ್ಪತ್ರೆಗಳ ಪ್ರಶ್ನೆಯಲ್ಲ, ಬಡವರ ಬದುಕಿನ ಪ್ರಶ್ನೆಯಾಗಿದೆ. ಜಿಲ್ಲೆಯ ಶಾಸಕರುಗಳ ಮೌನವು ಕೂಡ ಜನರಲ್ಲಿ ಅನುಮಾನ ಹುಟ್ಟಿಸಿದ್ದು, ಅವರು ಈ ಮಾರಾಟ ಪರ ನಿಲುವಿನಲ್ಲಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಸಾರ್ವಜನಿಕ ಆರೋಗ್ಯ ರಂಗದ ಖಾಸಗೀಕರಣದ ಬಹಳ ಪ್ರಮುಖ ಹೆಜ್ಜೆಯಾಗಿ ಕಾಣುತ್ತಿರುವ ಈ ಕ್ರಮದ ವಿರುದ್ಧ ಈಗಾಗಲೇ ಕೆಲವು ಜನಪರ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಧ್ವನಿ ಎತ್ತಿವೆ. ಆದರೆ ಸಿಪಿಐಎಂ ಹೊರತುಪಡಿಸಿ ಬಹುತೇಕ ಪಕ್ಷಗಳು ಮತ್ತು ಸಂಘಟನೆಗಳು ಮೌನವಾಗಿರುವುದು ವಿಷಾದನೀಯ. ಆರೋಗ್ಯದಂತಹ ಮೂಲಭೂತ ಹಕ್ಕಿನ ಪ್ರಶ್ನೆಯಲ್ಲಿ ರಾಜಕೀಯ ಭೇದಗಳಾಚೆಗೆ ಎಲ್ಲರೂ ಒಂದಾಗಿ ಚರ್ಚೆ ನಡೆಸಬೇಕಾದ ಅಗತ್ಯವಿದೆ.

ಮಂಗಳೂರಿನ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ಆರೋಗ್ಯ ಹೋರಾಟಗಾರರು ಹಾಗೂ ಸಾರ್ವಜನಿಕರು ಈ ವಿಷಯದಲ್ಲಿ ಮುಕ್ತ ಚರ್ಚೆ ನಡೆಸಿ ತಮ್ಮ ನಿಲುವು ಸ್ಪಷ್ಟಪಡಿಸಬೇಕಾಗಿದೆ. ಸಾರ್ವಜನಿಕ ಆಸ್ಪತ್ರೆಗಳು ಉಳಿದರೆ ಮಾತ್ರ ಬಡವರ ಬದುಕು ಉಳಿಯುತ್ತದೆ ಎಂಬ ಸತ್ಯವನ್ನು ನಾವು ಮರೆಯಬಾರದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ

Exit mobile version