Site icon Ullalavani

ನೀಟ್ ಹಗರಣಕ್ಕೆ ಮತ್ತೊಂದು ಬಲಿ; ಪತ್ರಿಕೆ ಸೋರಿಕೆಯಿಂದ ಪರೀಕ್ಷೆ ರದ್ದಾಗಿದ್ದಕ್ಕೆ 22 ವರ್ಷದ ವಿದ್ಯಾರ್ಥಿ ಸಾವು..!!

ನವದೆಹಲಿ, ಮೇ 16: ಮೇ ಮೊದಲ ವಾರದಲ್ಲಿ ನಡೆದಿದ್ದ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಈ ಪರೀಕ್ಷೆಯನ್ನು ರದ್ದುಗೊಳಿಸಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಆದೇಶ ಹೊರಡಿಸಿದೆ. ಮೇ 3ರಂದು ನಡೆದ ನೀಟ್-ಯುಜಿ ಪರೀಕ್ಷೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ ಶುಕ್ರವಾರ ರಾಜಸ್ಥಾನದ ಸಿಕಾರ್‌ನಲ್ಲಿ 22 ವರ್ಷದ ನೀಟ್ ಆಕಾಂಕ್ಷಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆ ಸಿಬಿಐ ತನಿಖೆ ಮುಂದುವರಿದಿದೆ. ಈಗಾಗಲೇ ಈ ಪ್ರಕರಣದ ಮುಖ್ಯ ಆರೋಪಿಯಾದ ಪ್ರೊಫೆಸರ್ ಪಿವಿ ಕುಲಕರ್ಣಿ ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಮೃತ ವಿದ್ಯಾರ್ಥಿಯ ಕುಟುಂಬಸ್ಥರು ಆತನ ಸಾವಿಗೆ ಪರೀಕ್ಷೆ ರದ್ದತಿಯಿಂದ ಉಂಟಾದ ಖಿನ್ನತೆಯೇ ಕಾರಣ ಎಂದು ಹೇಳಿದ್ದು, ಅದರಲ್ಲಿ ಆತ ಉತ್ತಮ ಅಂಕಗಳನ್ನು ಗಳಿಸುವ ನಿರೀಕ್ಷೆ ಇಟ್ಟುಕೊಂಡಿದ್ದ ಎಂದು ಹೇಳಿದ್ದಾರೆ. ರಾಜಸ್ಥಾನದ ಜುನ್ಜುನು ಜಿಲ್ಲೆಯ ನಿವಾಸಿ ಪ್ರದೀಪ್ ಮೇಘವಾಲ್ ಎಂಬ 22 ವರ್ಷದ ಯುವಕನೇ ಮೃತ ವಿದ್ಯಾರ್ಥಿ. ಪ್ರದೀಪ್ ತನ್ನ ಸಹೋದರಿಯರೊಂದಿಗೆ ಸಿಕಾರ್‌ನ ಬಾಡಿಗೆ ರೂಂನಲ್ಲಿ ವಾಸಿಸುತ್ತಿದ್ದರು. ಕಳೆದ 3 ವರ್ಷಗಳಿಂದ ನೀಟ್‌ಗೆ ತಯಾರಿ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನೀಟ್ ಪರೀಕ್ಷೆ ರದ್ದಾದಾಗಲಿಂದ ಬಹಳ ಬೇಸರಗೊಂಡಿದ್ದ ಪ್ರದೀಪ್ ರೂಂನಲ್ಲಿಯೇ ತನ್ನ ಸಹೋದರಿಯ ದುಪಟ್ಟಾದಿಂದ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ. 3 ವರ್ಷಗಳಿಂದ ನೀಟ್​​ಗೆ ತಯಾರಿ ನಡೆಸುತ್ತಿದ್ದ ಪ್ರದೀಪ್ ಈ ಬಾರಿ ಸುಮಾರು 650 ಅಂಕಗಳನ್ನು ನಿರೀಕ್ಷಿಸಿದ್ದರು. ಆದರೆ ಪರೀಕ್ಷೆ ರದ್ದಾದ ನಂತರ ದುಃಖಿತನಾಗಿದ್ದರು ಎನ್ನಲಾಗಿದೆ.

ಶುಕ್ರವಾರ ಮಧ್ಯಾಹ್ನ, ಪ್ರದೀಪ್ ಅವರ ಅಕ್ಕ ಬಾತ್​​ರೂಂನಲ್ಲಿದ್ದಾಗ ಅವರು ನೇಣು ಹಾಕಿಕೊಂಡಿದ್ದಾರೆ. ಬಾತ್​​ರೂಂನಿಂದ ಬಂದ ಆಕೆ ಪ್ರದೀಪ್ ಸೀಲಿಂಗ್ ಫ್ಯಾನ್‌ನಲ್ಲಿ ನೇತಾಡುತ್ತಿರುವುದನ್ನು ಕಂಡು ಆಘಾತಗೊಂಡು ತಕ್ಷಣ ಕತ್ತರಿಯಿಂದ ದುಪಟ್ಟಾ ಕತ್ತರಿಸಿದ್ದಾರೆ. ತಕ್ಷಣ ಮನೆ ಮಾಲೀಕರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪ್ರದೀಪ್​ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಅಲ್ಲಿ ಅವರು ಮೃತಪಟ್ಟಿದ್ದಾರೆ.ನೀಟ್ ಪರೀಕ್ಷೆ ರದ್ದಾದ ಬಳಿಕ ದೇಶಾದ್ಯಂತ ಇದೇ ರೀತಿಯ ಕೆಲವು ಘಟನೆಗಳಳು ನಡೆದಿವೆ. ದೆಹಲಿಯ ಆಜಾದ್‌ಪುರದಲ್ಲಿ 20 ವರ್ಷದ ನೀಟ್ ಆಕಾಂಕ್ಷಿಯೊಬ್ಬರು ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಅಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿರಲಿಲ್ಲ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ಪತ್ತೆಯಾಗಿಲ್ಲ.

ಉತ್ತರ ಪ್ರದೇಶದ ಲಖಿಂಪುರ ಖೇರಿಯ 21 ವರ್ಷದ ರಿತಿಕ್ ಮಿಶ್ರಾ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ವಿಷಯ ತಿಳಿದು ಮನನೊಂದು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ. ಅವರು ಮೂರನೇ ಬಾರಿ ನೀಟ್ ಪರೀಕ್ಷೆ ಬರೆದಿದ್ದು, ಉತ್ತೀರ್ಣವಾಗುವ ನಿರೀಕ್ಷೆಯಲ್ಲಿದ್ದರು. ಅಲ್ಲಿ ಕೂಡ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಆದರೆ, ಅವರ ಕುಟುಂಬವು ಈ ಘಟನೆಗೆ ಪರೀಕ್ಷಾ ವಿವಾದವೇ ಕಾರಣ ಎಂದು ಹೇಳಿದೆ.

ಹಾಗೇ, ದಕ್ಷಿಣ ಗೋವಾ ಜಿಲ್ಲೆಯಲ್ಲಿ 17 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ಸಂಜೆ ಮಾರ್ಗೋದಲ್ಲಿರುವ ತನ್ನ ಮನೆಯಲ್ಲಿ ಅವರು ನೇಣು ಬಿಗಿದುಕೊಂಡಿದ್ದರು. ನೀಟ್-ಯುಜಿ 2026 ಪರೀಕ್ಷೆಗೆ ಹಾಜರಾಗಿದ್ದ ಆತ ಸೂಸೈಡ್ ನೋಟ್​​ನಲ್ಲಿ ತನ್ನ ಸಾವಿಗೆ ಶೈಕ್ಷಣಿಕ ಒತ್ತಡ ಕಾರಣ ಎಂದು ಬರೆದಿದ್ದಾರೆ.

Exit mobile version