ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಾಲ್ ಸೆಂಟರ್ ಉದ್ಯೋಗಿಯ ಮೇಲೆ ಚಲಿಸುವ ವಾಹನದಲ್ಲಿ ಗ್ಯಾಂಗ್ ರೇಪ್ ನಡೆಸಿದ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಮೂವರು ವಿಶೇಷ ಪೊಲೀಸರ ತಂಡಗಳನ್ನು ರಚನೆ ಮಾಡಲಾಗಿದೆ.
ಅತ್ಯಾಚಾರಕ್ಕೆ ಗುರಿಯಾದ ಯುವತಿ ಮಧ್ಯಪ್ರದೇಶ ಮೂಲದವಳು ಎಂದು ತಿಳಿದುಬಂದಿದ್ದು, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಳು.
ಅಸ್ವಸ್ಥಗೊಂಡಿದ್ದ ಯುವತಿ, ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು ಆಕೆಯನ್ನು ಸೇಂಟ್ಸ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎರಡು ದಿನದಿಂದ ಸೇಂಟ್ಸ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈಕೆಯನ್ನು ಸೋಮವಾರ ಆಸ್ಪತ್ರೆಯಿಂದ ಹಾಸ್ಟೆಲ್‍ಗೆ ಮರಳಿದ್ದಾರೆ.
ಮೂವರ ಶಂಕಿತರ ಬಂಧನ:
ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿವಾಳ ಠಾಣಾ ಪೊಲೀಸರು ತನಿಖೆ ಚುರುಕು ಗೊಳಿಸಿದ್ದು, ಮಂಗಳವಾರ ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಟಿಟಿ ವಾಹನದಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಹಿನ್ನಲೆಯಲ್ಲಿ ನೊಂದಣಿ ಮೂಲವನ್ನು ಪೊಲೀಸರು ಪತ್ತೆ ಹಚ್ಚಿದ್ದು, ಇಂದಿರಾ ನಗರದ ಆರ್ ಟಿ ಓ ನಲ್ಲಿ ನೊಂದಣಿಯಾಗಿರುವುದು ತಿಳಿದುಬಂದಿದೆ.
ಟಿಟಿ ವಾಹನದಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿಯ ಪರಿಚಯಸ್ಥನೂ ಇದ್ದ ಎಂದು ತನಿಖೆಯ ವೇಳೆ ತಿಳಿದುಬಂದಿದೆ.