ನವದೆಹಲಿ: ದೇಶದ ಅತ್ಯಂತ ಪ್ರಮುಖ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಸಿಬಿಐ ತನಿಖೆಯಲ್ಲಿ ಆತಂಕಕಾರಿ ಮಾಹಿತಿಗಳು ಹೊರಬರುತ್ತಿವೆ. ರಾಜಸ್ಥಾನದ ಒಂದೇ ಕುಟುಂಬದ ಐವರು ವೈದ್ಯಕೀಯ ಸೀಟು ಪಡೆದಿರುವುದು ಇದೀಗ ದೊಡ್ಡ ಅನುಮಾನಕ್ಕೆ ಕಾರಣವಾಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಜಾಲದ ಸಂಪರ್ಕ ಇದೆಯೇ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.
ಸಿಬಿಐ ಮಾಹಿತಿ ಪ್ರಕಾರ, ಜೈಪುರ ಗ್ರಾಮೀಣ ಪ್ರದೇಶದ ಜಮ್ಮರಾಮಗಢದ ಒಂದೇ ಕುಟುಂಬದ ಐವರು ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ. ದಿನೇಶ್ ಅವರ ಮಗಳು ಗುಂಜನ್ ಬನಾರಸ್ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದಿದ್ದರೆ, ಕುಟುಂಬದ ಇತರ ಸದಸ್ಯರಾದ ಸೋನಿಯಾ, ಪ್ರಕೃತಿ ಮತ್ತು ವಿಕಾಸ್ ಕೂಡ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಮಾಹಿತಿ ಲಭ್ಯವಾಗಿದೆ.
ತನಿಖೆಯಲ್ಲಿ ಮಹಾರಾಷ್ಟ್ರ, ಹರಿಯಾಣ ಮತ್ತು ರಾಜಸ್ಥಾನವನ್ನು ಸಂಪರ್ಕಿಸುವ ದೊಡ್ಡ ಮಟ್ಟದ ಪ್ರಶ್ನೆಪತ್ರಿಕೆ ಸೋರಿಕೆ ಜಾಲ ಕಾರ್ಯನಿರ್ವಹಿಸುತ್ತಿದ್ದ ಸುಳಿವು ಸಿಕ್ಕಿದೆ. ಪರೀಕ್ಷೆಗೆ ಮುನ್ನವೇ ಪ್ರಶ್ನೆಪತ್ರಿಕೆ ದೊರೆಯುತ್ತದೆ ಎಂದು ಭರವಸೆ ನೀಡಿ ಲಕ್ಷಾಂತರ ರೂಪಾಯಿ ಹಣ ಪಡೆದು ಪ್ರಶ್ನೆಪತ್ರಿಕೆ ಹಂಚಿಕೆ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಪರೀಕ್ಷೆಗೆ ಸುಮಾರು 15 ಗಂಟೆಗಳ ಮೊದಲು ಕೆಲ ವಿದ್ಯಾರ್ಥಿಗಳ ಕೈಗೆ ಪ್ರಶ್ನೆಪತ್ರಿಕೆ ತಲುಪಿದ್ದ ಮಾಹಿತಿ ತನಿಖೆಗೆ ಮತ್ತಷ್ಟು ವೇಗ ನೀಡಿದೆ.
ಇದಕ್ಕೂ ಮೀರಿಯಾಗಿ “ಪರೀಕ್ಷೆ ನಡೆಯುವ 45 ಗಂಟೆಗಳ ಮುಂಚೆಯೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ” ಎಂಬ ಅಚ್ಚರಿಯ ಸಂಗತಿಯೂ ಬೆಳಕಿಗೆ ಬಂದಿದೆ. ಇದರೊಂದಿಗೆ ದೇಶದ ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ಭದ್ರತೆ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.
ಇದೀಗ ಸಾರ್ವಜನಿಕ ವಲಯದಲ್ಲಿ ದೊಡ್ಡ ಪ್ರಶ್ನೆಗಳು ಕೇಳಿಬರುತ್ತಿವೆ —ಈ ಹಗರಣಕ್ಕೆ ಹೊಣೆ ಯಾರದು?
ಪ್ರಶ್ನೆಪತ್ರಿಕೆ ಭದ್ರತೆಯಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪದಡಿ ಇನ್ನೂ ಯಾಕೆ ಕ್ರಮ ಕೈಗೊಳ್ಳಲಾಗಿಲ್ಲ?
ಕೇಂದ್ರ ಶಿಕ್ಷಣ ಸಚಿವಾಲಯ ಈ ವಿಚಾರದಲ್ಲಿ ಯಾಕೆ ಮೌನವಾಗಿದೆ?
ದೇಶದ ಸಂಸದರು ಯಾಕೆ ಕೇಂದ್ರ ಸಚಿವರನ್ನು ನೇರವಾಗಿ ಪ್ರಶ್ನೆ ಮಾಡುತ್ತಿಲ್ಲ?
ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬೇಕು ಹಾಗೂ ಹೊಣೆಗಾರ ಅಧಿಕಾರಿಗಳನ್ನು ಕಾನೂನು ಮುಂದೆ ತರಬೇಕು ಎಂಬ ಆಗ್ರಹ ದೇಶಾದ್ಯಂತ ಕೇಳಿಬರುತ್ತಿದೆ.