Site icon Ullalavani

ಡೀಸೆಲ್ ದರ ಏರಿಕೆ : ಖಾಸಗಿ ಬಸ್ ನೌಕರರು ಮತ್ತು ಸಾರ್ವಜನಿಕರ ಮೇಲೆ ಭಾರೀ ಹೊರೆ

ಮಂಗಳೂರು, ಮೇ 15: ಇತ್ತೀಚೆಗೆ ಮತ್ತೆ ಡೀಸೆಲ್ ದರ ಏರಿಕೆಯಾಗಿರುವುದು ಖಾಸಗಿ ಬಸ್ ಕ್ಷೇತ್ರಕ್ಕೆ ದೊಡ್ಡ ಹೊಡೆತ ನೀಡಿದೆ. ಈಗಾಗಲೇ ವಾಹನಗಳ ನಿರ್ವಹಣಾ ವೆಚ್ಚ, ಸ್ಪೇರ್ ಪಾರ್ಟ್ಸ್, ಇನ್ಶೂರೆನ್ಸ್, ತೆರಿಗೆ, ಫಿಟ್ನೆಸ್ ಹಾಗೂ ದೈನಂದಿನ ಖರ್ಚುಗಳಿಂದ ಸಂಕಷ್ಟದಲ್ಲಿರುವ ಖಾಸಗಿ ಬಸ್ ವ್ಯವಸ್ಥೆಗೆ ಈ ದರ ಏರಿಕೆ ಮತ್ತಷ್ಟು ಆರ್ಥಿಕ ಒತ್ತಡ ಉಂಟುಮಾಡಲಿದೆ ಎಂದು ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘ ಆತಂಕ ವ್ಯಕ್ತಪಡಿಸಿದೆ.

ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ಸಾವಿರಾರು ವಿದ್ಯಾರ್ಥಿಗಳು, ಕಾರ್ಮಿಕರು, ಉದ್ಯೋಗಿಗಳು ಹಾಗೂ ವ್ಯಾಪಾರಸ್ಥರು ಪ್ರತಿದಿನ ಖಾಸಗಿ ಬಸ್‌ಗಳನ್ನೇ ಅವಲಂಬಿಸಿಕೊಂಡಿದ್ದಾರೆ. ಡೀಸೆಲ್ ದರ ಏರಿಕೆಯಿಂದ ಬಸ್ ಮಾಲೀಕರು ಮಾತ್ರವಲ್ಲದೆ ಚಾಲಕರು, ನಿರ್ವಾಹಕರು ಹಾಗೂ ಇತರ ನೌಕರರ ಮೇಲೂ ನೇರ ಪರಿಣಾಮ ಬೀಳಲಿದೆ ಎಂದು ಸಂಘ ತಿಳಿಸಿದೆ.

ಈಗಾಗಲೇ ಕಡಿಮೆ ವೇತನ ಮತ್ತು ಅನಿಶ್ಚಿತ ಪರಿಸ್ಥಿತಿಯಲ್ಲಿ ದುಡಿಯುತ್ತಿರುವ ನೌಕರರ ಜೀವನ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಕೆಲವೊಮ್ಮೆ ಮಾರ್ಗ ಕಡಿತ, ಬಸ್ ಸಂಚಾರ ನಿಲುಗಡೆ ಹಾಗೂ ನೌಕರರ ಕೆಲಸದ ಭದ್ರತೆಗೂ ಸಮಸ್ಯೆ ಎದುರಾಗುವ ಆತಂಕ ವ್ಯಕ್ತವಾಗಿದೆ.

ಸರ್ಕಾರ ತಕ್ಷಣ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸುವುದು, ಖಾಸಗಿ ಸಾರ್ವಜನಿಕ ಸಾರಿಗೆ ಕ್ಷೇತ್ರಕ್ಕೆ ವಿಶೇಷ ಸಬ್ಸಿಡಿ ನೀಡುವುದು ಹಾಗೂ ಖಾಸಗಿ ಬಸ್ ಕ್ಷೇತ್ರವನ್ನು ಉಳಿಸುವ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೇ ದೊಡ್ಡ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ ಎಂದು ಸಂಘ ಒತ್ತಾಯಿಸಿದೆ.

ಸಾಮಾನ್ಯ ಜನರ ಸಂಚಾರ ಮತ್ತು ಸಾವಿರಾರು ನೌಕರರ ಬದುಕಿಗೆ ಸಂಬಂಧಿಸಿದ ಈ ಗಂಭೀರ ವಿಷಯದಲ್ಲಿ ಸರ್ಕಾರ ಮಾನವೀಯ ದೃಷ್ಟಿಕೋನದಿಂದ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘದ ಅಧ್ಯಕ್ಷ ಉಸ್ಮಾನ್ ಅಲ್ತಾಫ್ ಆಗ್ರಹಿಸಿದ್ದಾರೆ.

Exit mobile version