ಹಿಟ್ಲರ್ ಕಲ್ಯಾಣ’ ಧಾರಾವಾಹಿ ಖ್ಯಾತಿಯ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು (ಮೇ 13) ಸಂಜೆ ಗುನ್ನೂರು ಬಳಿಯ ಫಾರ್ಮ್‌ಹೌಸ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ರಾಮನಗರ ತಾಲೂಕಿನ ಗುನ್ನೂರು ಗ್ರಾಮದ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಕೆಲಸಗಾರರು ಹಾಗೂ ಗ್ರಾಮಸ್ಥರು ಗುಂಡಿತೋಡುವ ಕಾರ್ಯ ಆರಂಭಿಸಿದ್ದಾರೆ. ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.
10 ವರ್ಷಗಳ ಹಿಂದೆ ನಟ ದಿಲೀಪ್ ರಾಜ್ 1 ಎಕರೆ ಜಮೀನು ಖರೀದಿಸಿದ್ದರು. ಅಲ್ಲಿ ತೋಟ ನಿರ್ಮಾಣ ಮಾಡಿಕೊಂಡು ಮನೆ ಕಟ್ಟಿದ್ದರು. ತಿಂಗಳಿಗೊಮ್ಮೆ ಫಾರ್ಮ್‌ಹೌಸ್‌ಗೆ ಭೇಟಿ ನೀಡುತ್ತಿದ್ದರು. ಇಂದು ಬೆಳಗಿನ ಜಾವ ದಿಲೀಪ್ ರಾಜ್‌ಗೆ ಹೃದಯಾಘಾತವಾಗಿದೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಕೂಡ ಚಿಕಿತ್ಸೆಗೆ ಸ್ಪಂದಿಸದೇ ದಿಲೀಪ್ ರಾಜ್ ಕೊನೆಯುಸಿರೆಳೆದಿದ್ದಾರೆ. ದಿಲೀಪ್ ರಾಜ್ ಅವರ ಮೃತದೇಹ ಕುಮಾರಸ್ವಾಮಿ ಲೇಔಟ್‌ನ ಅಪೋಲೊ ಆಸ್ಪತ್ರೆಯಲ್ಲಿರಿಸಲಾಗಿದೆ. ದಿಲೀಪ್ ನಿಧನಕ್ಕೆ ಕನ್ನಡ ಚಿತ್ರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.