ಚೆನ್ನೈ, ಮೇ. 13 : ಟಿವಿಕೆ, ಕಾಂಗ್ರೆಸ್, ಸಿಪಿಎಂ, ಸಿಪಿಐ, ಮುಸ್ಲಿಮ್ ಲೀಗ್, ವಿಸಿಕೆ ಜೊತೆ ಎಐಎಡಿಎಂಕೆಯ ಬಂಡಾಯ ಎದ್ದಿರುವ 27 ಶಾಸಕರು ಟಿವಿಕೆ ಮುಖ್ಯಸ್ಥ ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಈ ಮೂಲಕ ಸರ್ಕಾರಕ್ಕೆ 144 ಮಂದಿ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಬಹುಮತ ಸಾಬೀತು ಪಡಿಸುವ ವೇಳೆ ಡಿಎಂಕೆ ಮತ್ತು ಪಿಎಂಕೆ ಶಾಸಕರು ಸಭಾತ್ಯಾಗ ಮಾಡಿದರು. ಒಬ್ಬ ಬಿಜೆಪಿ ಶಾಸಕರು ಮತದಾನದಿಂದ ದೂರ ಉಳಿದರು. ಆದರೆ ಸದನದಲ್ಲಿದ್ದ 22 ಎಐಎಡಿಎಂಕೆ ಶಾಸಕರು ವಿಶ್ವಾಸಮತದ ವಿರುದ್ಧ ಮತ ಚಲಾಯಿಸಿದರು.234 ಶಾಸಕರನ್ನು ಹೊಂದಿರುವ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ 118 ಶಾಸಕರ ಅಗತ್ಯವಿದೆ. ವಿಜಯ್ ತಿರುಚಿ ಪಶ್ಚಿಮ ಮತ್ತು ಪೆರಂಬೂರು ಕ್ಷೇತ್ರದಿಂದ ಸ್ಪರ್ಧಿಸಿದ ಹಿನ್ನೆಲೆ ಅದನ್ನು ಒಂದು ಎಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ ತಿರುಪತ್ತೂರು ಟಿವಿಕೆ ಶಾಸಕ ಶ್ರೀನಿವಾಸ್ ಸೇತುಪತಿ ಅವರಿಗೆ ಬಹುಮತ ಸಾಬೀತು ಪ್ರಕ್ರಿಯೆಯಲ್ಲಿ ಭಾಗಿಯಾಗದಂತೆ ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆ ವಿಧಾನಸಭೆಯ ಬಲ 232ಕ್ಕೆ ಇಳಿದಿದ್ದು, ಬಹುಮತಕ್ಕೆ 116 ಶಾಸಕರ ಬೆಂಬಲ ಅಗತ್ಯವಿತ್ತು.