Site icon Ullalavani

ತ್ರಿಶಾ ನಟನೆಯ ‘ಕರುಪ್ಪು’ ಸಿನಿಮಾಗೆ ವಿಶೇಷ ಅನುಮತಿ ನೀಡಿದ ಸಿಎಂ ವಿಜಯ್

ದಳಪತಿ ವಿಜಯ್ ಅವರು ಮುಖ್ಯಮಂತ್ರಿ ಆಗಿರುವುದು ಚಿತ್ರರಂಗದ ಹಲವರಿಗೆ ಸಂತಸ ತಂದಿದೆ. ಸೂರ್ಯ ಮತ್ತು ತ್ರಿಶಾ ಕೃಷ್ಣನ್ ನಟನೆಯ ‘ಕರುಪ್ಪು’ ಸಿನಿಮಾಗೆ ವಿಜಯ್ ಅವರು ವಿಶೇಷ ಅನುಮತಿ ನೀಡಿದ್ದಾರೆ. ಅದಕ್ಕಾಗಿ ವಿಜಯ್ ಅವರಿಗೆ ಈ ಚಿತ್ರತಂಡದವರು ಧನ್ಯವಾದ ತಿಳಿಸಿದ್ದಾರೆ. 

ಕಾಲಿವುಡ್‌ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ಕರುಪ್ಪು’ ಸಿನಿಮಾ ಮೇ 14ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾದಲ್ಲಿ ಸೂರ್ಯ ಮತ್ತು ತ್ರಿಶಾ ಕೃಷ್ಣನ್ ಅವರು ಜೋಡಿಯಾಗಿ ಅಭಿನಯಿಸಿದ್ದಾರೆ. ಚಿತ್ರದ ಬಿಡುಗಡೆ ಸಮಯದಲ್ಲಿ ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್  ಅವರು ಚಿತ್ರತಂಡಕ್ಕೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಮೊದಲ ಪ್ರದರ್ಶನ ಮಾಡಲು ವಿಜಯ್ ಅವರು ಅನುಮತಿ ನೀಡಿದ್ದಾರೆ. ವಿಜಯ್ ಜೊತೆ ತ್ರಿಶಾ  ಅವರು ಆಪ್ತತೆ ಹೊಂದಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ.

ಸಾಮಾನ್ಯವಾಗಿ ತಮಿಳುನಾಡಿನಲ್ಲಿ ಮುಂಜಾನೆಯ ಪ್ರದರ್ಶನಗಳಿಗೆ ಕಟ್ಟುನಿಟ್ಟಿನ ನಿಯಮಗಳಿವೆ. ಆದರೆ, ಆರ್.ಜೆ. ಬಾಲಾಜಿ ನಿರ್ದೇಶನದ ‘ಕರುಪ್ಪು’ ಚಿತ್ರದ ಕ್ರೇಜ್ ಪರಿಗಣಿಸಿ, ಮುಖ್ಯಮಂತ್ರಿ ವಿಜಯ್ ಅವರು ಮೇ 14ರಿಂದ ಬೆಳಿಗ್ಗೆ 9 ಗಂಟೆಗೆ ವಿಶೇಷ ಪ್ರದರ್ಶನಗಳನ್ನು ನಡೆಸಲು ಅನುಮತಿ ನೀಡಿದ್ದಾರೆ. ಇದರಿಂದ ಸೂರ್ಯ ಅಭಿಮಾನಿಗಳು ಸಂಭ್ರಮದಲ್ಲಿದ್ದಾರೆ.

ಚಿತ್ರದ ನಿರ್ಮಾಣ ಸಂಸ್ಥೆಯಾದ ‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ಈ ಕುರಿತು ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಸಿಎಂ ವಿಜಯ್ ಅವರು ಕಡತಕ್ಕೆ ಸಹಿ ಹಾಕುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ನಿರ್ಮಾಪಕರು, ‘ನಮ್ಮ ಗೌರವಾನ್ವಿತ ಮುಖ್ಯಮಂತ್ರಿಗಳಾದ ತಿರು ಜೋಸೆಫ್ ವಿಜಯ್ ಅವರಿಗೆ ಧನ್ಯವಾದಗಳು. ನಿಮ್ಮ ವಿಶೇಷ ಅನುಮತಿಯಿಂದ ಮೇ 14ರಿಂದ ಬೆಳಿಗ್ಗೆ 9 ಗಂಟೆಗೆ ಮೊದಲ ಪ್ರದರ್ಶನ ಆರಂಭವಾಗಲಿದೆ’ ಎಂದು ಬರೆದುಕೊಂಡಿದ್ದಾರೆ.

Exit mobile version