Site icon Ullalavani

ಕೋಟೆಕಾರ್–ಹಿದಾಯತ್ ನಗರದಲ್ಲಿ ಕೃತಕ ನೆರೆ: ಮಳೆಗೆ ಮನೆಗಳಿಗೆ ನೀರು ನುಗ್ಗಿ ಜನರ ಪರದಾಟ

ಕೋಟೆಕಾರ್ ಹಾಗೂ ಹಿದಾಯತ್ ನಗರ ಪ್ರದೇಶಗಳಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಕೃತಕ ನೆರೆ ಉಂಟಾಗಿ ಸ್ಥಳೀಯ ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸಿದರು. ಸಿಡಿಲು-ಮಿಂಚಿನೊಂದಿಗೆ ಧಾರಾಕಾರವಾಗಿ ಸುರಿದ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಹಲವು ಮನೆಗಳು ಜಲಾವೃತಗೊಂಡವು.

ಸ್ಥಳೀಯ ನಿವಾಸಿಗಳಾದ ಹನೀಫ್ ಎಸ್.ಎಂ., ರಂಲಾ, ಬಶೀರ್ ಹಾಗೂ ಯುಸುಫ್ ಅವರ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಕುಟುಂಬಸ್ಥರು ಇಡೀ ರಾತ್ರಿ ನಿದ್ರೆಯಿಲ್ಲದೆ ಕಳೆಯುವಂತಾಯಿತು. ಮನೆಗಳಲ್ಲಿ ನೀರು ನಿಂತ ಕಾರಣ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದ್ದು, ನಿವಾಸಿಗಳು ಆತಂಕದಲ್ಲಿದ್ದರು.

ತಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿದ್ಯಾನಗರ ಪ್ರದೇಶದಲ್ಲಿ ಖಾಸಗಿ ವ್ಯಕ್ತಿಗಳು ಎಕರೆಗಟ್ಟಲೆ ಜಾಗ ಖರೀದಿಸಿ ಸಮತಟ್ಟು ಮಾಡಿದ ಪರಿಣಾಮ ಮಳೆನೀರು ಹರಿಯುವ ಸಹಜ ದಾರಿ ಮುಚ್ಚಲ್ಪಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ, ಆ ಜಾಗದ ನೀರನ್ನು ಹಿದಾಯತ್ ನಗರ ಮುಳ್ಳುಗುಡ್ಡೆ ಪ್ರದೇಶದ ಸಣ್ಣ ತೋಡಿಗೆ ಹರಿಸಿರುವುದೇ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ ಎಂದು ನಾಗರಿಕರು ದೂರಿದ್ದಾರೆ.

ಪ್ರತಿ ಮಳೆಗಾಲದಲ್ಲೂ ಇದೇ ರೀತಿಯ ಸಮಸ್ಯೆ ಎದುರಾಗುತ್ತಿದ್ದು, ಶಾಶ್ವತ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. “ಈ ಸಮಸ್ಯೆಗೆ ಪರಿಹಾರವೇ ಇಲ್ಲವೇ?” ಎಂಬ ಪ್ರಶ್ನೆಯನ್ನು ನಾಗರಿಕರು ಅಧಿಕಾರಿಗಳ ಮುಂದೆ ಮುಂದಿಟ್ಟಿದ್ದಾರೆ.

Exit mobile version