Site icon Ullalavani

ಶಿಕ್ಷಣ ವ್ಯವಸ್ಥೆಯಲ್ಲಿ ಸಂಶೋಧನೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ: ಶಿಕ್ಷಣ ವ್ಯವಸ್ಥೆಯಲ್ಲಿ ಸಂಶೋಧನೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಗಿದ್ದು, ಈ ನಿಟ್ಟಿನಲ್ಲಿ ಕ್ರಿಯಾಶೀಲ ಅನುಭವೀ ಮಾರ್ಗದರ್ಶಕರ ಸಮ್ಮುಖದಲ್ಲಿ ನಡೆಯುವ ಸಮಾವೇಶಗಳು ಸಂಶೋಧಕರಿಗೆ ಹೆಚ್ಚಿನ ಆಸಕ್ತಿಯನ್ನು ಮೂಡಿಸುತ್ತಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಹೇಳಿದರು.

ಅವರು ದೇರಳಕಟ್ಟೆಯ ಕ್ಷೇಮ ಆಡಿಟೋರಿಯಂನಲ್ಲಿ ಶನಿವಾರ ನಿಟ್ಟೆ ವಿಶ್ವವಿದ್ಯಾನಿಲಯ ಮತ್ತು ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ಜರಗಿದ ಕ್ಷೇಮ ಸ್ಟೆಮ್‍ಕಾನ್-2015 , ಕಾಂಡಕೋಶಗಳ ವಾಸ್ತು ಸ್ಥಿತಿ ಹಾಗೂ ಮೂಳೆಶಾಸ್ತ್ರಕ್ಕೆ ಅನ್ವಯವಾಗುವ ಜೀವಕೋಶ ಆಧಾರಿತ ಚಿಕಿತ್ಸೆಗೆ ಒತ್ತು ಕುರಿತ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಗಳು ಕ್ಷೀಣಿಸುತ್ತಿವೆ. ವೈದ್ಯಕೀಯ ಶಿಕ್ಷಣದ ಕ್ಷೇತ್ರದಲ್ಲಿ ಯುವ ಸಮುದಾಯಕ್ಕೆ ನಿಟ್ಟೆ ವಿ.ವಿ ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅದಕ್ಕಾಗಿ ಕ್ರಿಯಾಶೀಲ ಮಾರ್ಗದರ್ಶಕರೂ ಸಂಸ್ಥೆಯಲ್ಲಿ ಲಭ್ಯವಿದ್ದಾರೆ. ಇಂತಹ ಕ್ಷೇತ್ರದಲ್ಲಿನ ವಿಪುಲ ಅವಕಾಶಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.

ನಿಟ್ಟೆ ವಿ.ವಿ ಉಪಕುಲಪತಿ ಡಾ.ಯಸ್.ರಮಾನಂದ ಶೆಟ್ಟಿ ಮಾತನಾಡಿ ಭಾರತ ಸರಕಾರವು ಕಳೆದ ಹದಿನೈದು ವರುಷಗಳಿಂದ ವೈದ್ಯಕೀಯ ಸಂಶೋಧನೆಗಳಿಗೆ ಬೆಂಬಲ ನೀಡುತ್ತಿದ್ದು ,ನಮ್ಮ ಸಂಸ್ಥೆಯಲ್ಲೂ ವೈದ್ಯಕೀಯ ಸಂಶೋಧನೆಗಳನ್ನು ಹೆಚ್ಚಾಗಿ ಸುಧಾರಿಸುವ ಗುರಿಯನ್ನು ಇಟ್ಟುಕೊಂಡಿದೆ ಎಂದು ಹೇಳಿದರು.

ಕುಲಸಚಿವ ಡಾ.ಎಂ.ಎಸ್.ಮೂಡಿತ್ತಾಯ, ಕ್ಷೇಮದ ಡೀನ್ ಸತೀಶ್ ಕುಮಾರ್ ಭಂಡಾರಿ ಮುಖ್ಯ ಅತಿಥಿಗಳಾಗಿದ್ದರು. ಜಪಾನಿನ ಮಕ್ಕಳ ಆರೋಗ್ಯ ಮತ್ತು ಅಭಿವೃದ್ಧಿಯ ರಾಷ್ಟ್ರೀಯ ಸಂಶೋಧನೆ ಸಂಸ್ಥೆಯ ನಿರ್ದೇಶಕ ಡಾ.ಅಖಿಹಿರೊ ಉಮೇಝಾವ, ದಕ್ಷಿಣ ಕೊರಿಯಾದ ಜೀವಕೋಶ ಚಿಕಿತ್ಸಾ ಕೇಂದ್ರದ ನಿರ್ದೇಶಕ ಡಾ. ಸಿಯೋಕ್ ಜಂಗ್ ಕಿಮ್ ಹಾಗೂ ಯುನೈಟೆಡ್ ಕಿಂಗ್ಡಮ್ ನ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಡಾ. ಅಸೋಡೆ ಅನತ್‍ರಾಂ ಶೆಟ್ಟಿ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ನಿಟ್ಟೆ ವಿ.ವಿ.ಯ ಸಹಕುಲಾಧಿಪತಿ ಡಾ.ಎಂ.ಶಾಂತಾರಾಮ ಶೆಟ್ಟಿ ಸ್ವಾಗತಿಸಿದರು. ಕ್ಷೇಮದ ಸಹಾಯಕ ಪ್ರಾಧ್ಯಾಪಕ ಡಾ.ಸಿದ್ಧಾರ್ಥ್ ಎಂ.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕ್ಷೇಮ ಕುಲಸಚಿವ ಡಾ.ಕೆ.ಜಯಪ್ರಕಾಶ್ ಶೆಟ್ಟಿ ವಂದಿಸಿದರು.

Exit mobile version