Site icon Ullalavani

ಕುಡಿಯುವ ನೀರಿನ ಯೋಜನೆಗಳಿಗೆ ತಕ್ಷಣದ ವಿದ್ಯುತ್ ಸಂಪರ್ಕಕ್ಕೆ ಸ್ಪೀಕರ್ ಯು.ಟಿ. ಖಾದರ್ ಸೂಚನೆ

ಮಂಗಳೂರು, ಮೇ. 08: ಕುಡಿಯುವ ನೀರಿನ ಯೋಜನೆಗಳಿಗೆ ಯಾವುದೇ ವಿಳಂಬವಿಲ್ಲದೆ ತಕ್ಷಣವೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಗುರುವಾರ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಖಾದರ್ ಅವರು, ಅನೇಕ ಕಡೆಗಳಲ್ಲಿ ನೀರಿನ ಟ್ಯಾಂಕ್‌ಗಳು ಮತ್ತು ಕೊಳವೆಬಾವಿಗಳ ನಿರ್ಮಾಣವಾಗಿದ್ದರೂ, ವಿದ್ಯುತ್ ಸಂಪರ್ಕದ ವಿಳಂಬದಿಂದಾಗಿ ನೀರು ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸ್ಥಳೀಯ ಸಂಸ್ಥೆಗಳಿಂದ ಠೇವಣಿ ಮೊತ್ತಕ್ಕಾಗಿ ಕಾಯದೆ ವಿದ್ಯುತ್ ಸಂಪರ್ಕ ನೀಡುವಂತೆ ಈಗಾಗಲೇ ಸರ್ಕಾರ ಸೂಚನೆ ನೀಡಿದೆ. ಗ್ರಾಮ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆಯಾದ ನಂತರ ಈ ಮೊತ್ತವನ್ನು ಹೊಂದಾಣಿಕೆ ಮಾಡುವಂತೆ ಅವರು ತಿಳಿಸಿದ್ದಾರೆ.ಕುಡಿಯುವ ನೀರಿನ ಯೋಜನೆಗಳನ್ನು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಬೇಕು. ಮುಂದಿನ 30 ವರ್ಷಗಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಸಿದ್ಧಪಡಿಸಬೇಕು. ಅಗತ್ಯವಿದ್ದರೆ ವಿಶೇಷ ಅನುದಾನ ಒದಗಿಸಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದ್ದಾರೆಪೈಪ್‌ಲೈನ್ ಮೂಲಕ ನೀರು ಪೂರೈಸಲು ಸಾಧ್ಯವಾಗದ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಬೇಕು. ಟಾಸ್ಕ್ ಫೋರ್ಸ್ ಮೂಲಕವೂ ಇದಕ್ಕೆ ಆರ್ಥಿಕ ನೆರವು ನೀಡಲಾಗುವುದು ಎಂದರು.

ಮುಂಗಾರು ಮುನ್ನೆಚ್ಚರಿಕೆ ಕ್ರಮಗಳು
ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿಯುವಂತೆ ಮಾಡಲು ಚರಂಡಿಗಳ ಹೂಳೆತ್ತುವ ಕಾರ್ಯವನ್ನು ತಕ್ಷಣವೇ ಕೈಗೊಳ್ಳಬೇಕು. ಪ್ರವಾಹ ಪೀಡಿತ ಮತ್ತು ನೀರು ನಿಲ್ಲುವ ಪ್ರದೇಶಗಳನ್ನು ಮೊದಲೇ ಗುರುತಿಸಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಕಳೆದ ಬಾರಿ ನೈಸರ್ಗಿಕ ವಿಕೋಪಕ್ಕೆ ಒಳಗಾದ ಪ್ರದೇಶಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಮಳೆಗಾಲದಲ್ಲಿ ಯಾವುದೇ ಅನಾಹುತ ಸಂಭವಿಸಿದಲ್ಲಿ ಸ್ಥಳೀಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.ಈ ಸಭೆಯಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Exit mobile version